ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, -: ಅಲ್ಲಮಪ್ರಭುದೇವರ ವಚನ. ✍🏾-;ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ. ವಚನ-;ಅಲ್ಲಮಪ್ರಭುದೇವರು. ಅಲ್ಲಮರ ಈ ವಚನ ಲಿಂಗಾನುಸಂಧಾನದ ನಂತರ ಅದಕ್ಕೂ ಮೀರಿದ ಪರಿಪೂರ್ಣ ನಿಜ ಸುಖದ ಬಯಲ ಬಿಡಾಡಿಗಳಿಗೆ ಲಭಿಸುವ ಅನಂತತೆಯ ಆನಂದವಾಗಿದೆ. ಕಣ್ಣಿಂಗೆ ಕಣ್ಣು, ಕಣ್ಮುಚ್ಚಿ ಮಲಗಿದರೂ ಇಡೀ ಜಗತ್ತನ್ನೇ ತಂದು ತೋರುವ ಮನಸ್ಸು, ನೋಡದ ವಸ್ತುವನ್ನು, ಕಲ್ಪಿಸುವಷ್ಟರಲ್ಲಿ ಅದರ ಚಿತ್ರವನ್ನೇ ತಂದಿಡಬಲ್ಲ ಮನಸ್ಸು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ಅದು ಮನಸ್ಸಿಗೇ ಮನಸ್ಸು ಅರಿವೆಂಬ ಕಣ್ಣು, ಕಂಡಿದ್ದನ್ನು ಪ್ರಮಾಣಿಸಿ ನೋಡುವ ಅರಿವಿನ ಕಣ್ಣು , ಅದೇ ನೇತ್ರ. ಆ ನೇತ್ರವೇ (ಅರಿವಿನ ದೃಷ್ಠಿಯೇ) ಲಿಂಗವನ್ನು ಅನುಸಂಧಾನಿಸುವ ಸೂತ್ರ, ಆ ಸೂತ್ರವಿಡಿದು ಜ್ಯೋತಿವಿಡಿದು ಜ್ಯೋತಿಯಾದಂತೆ ಸೂತ್ರವೇ ಲಿಂಗ, ಲಿಂಗವೆ ಗುಹ್ಯ, ಹಿಡಿದ ಸೂತ್ರ ಕಾಣಲಾರದ ಪಟ, ಅದುವೇ ಪ್ರಕೃತಿಯ ಅಗೋಚರ ಸತ್ಯ ಗುಹ್ಯ. ಗುಹ್ಯಕ್ಕೆ ಗುಹ್ಯ, ಅಗೋಚರಕ್ಕೂ ಅಗೋಚರ ಪರಮ ವಿಸ್ತ್ರುತ ವಿಸ್ತಾರ ಸತ್ಯವದು, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೂ ರಹಸ್ಯ ಸೃಷ್ಠಿಯ ಪ್ರತಿ ಚಲನೆಯೂ ಕ್ಷಣಕ್ಷಣಕ್ಕೂ ...