ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ, ವಚನ- ವಿಶ್ವಗುರು_ಬಸವಣ್ಣನವರು. ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ
ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ,
ಅದೇನು ಕಾರಣ ತಂದೆಯೆಂದರಿದೆನಯ್ಯಾ,
ಎನ್ನ ಕಾರಣ ತಂದೆಯೆಂದರಿದೆನಯ್ಯಾ,
ಅರಿದರಿದು, ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು
ಕಣ್ದೆರೆದೆನಯ್ಯಾ, ಕೂಡಲ ಸಂಗಮದೇವಾ.
✍🏾-; ವಿಶ್ವಗುರು ಬಸವಣ್ಣನವರು.
ಸ್ಥಲ - ಪಿಂಡಜ್ಞಾನಸ್ಥಲ
ವಿಷಯ - ಪುನರ್ಜನ್ಮ
ಭಾವಾರ್ಥ-
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ
ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ.
ಅಯ್ಯಾ, ಪರಮದಯಾಮಯಿಯಾದ ನಿರಾಕಾರ ಸೃಷ್ಠಿಕರ್ತನೇ, ನಿಮ್ಮ ಶರಣನ (ಅರಿವಿನ ಸಕಾರ ರೂಪ) ಮರ್ತ್ಯಕ್ಕೆ ತಂದೆಯಾಗಿ ನಾನು ಬದುಕಿದೆನಯ್ಯಾ,
ನೆನೆನೆನೆದು ಸುಖಿಯಾಗಿ ಮರೆವೆಯ ಕತ್ತಲು ಕಳೆದು ಅರಿವಿನ ಚಿದ್ಬೆಳಕ ಮೂಡಿ ಆ ಬೆಳಕಿನ ಪಥದಲ್ಲಿ ಸುಖಿಯಾಗಿ ಬದುಕಿದೆನಯ್ಯಾ,
ಯಾವ ಕಾರಣಕ್ಕಾಗಿ ನಿಮ್ಮ ಶರಣನನ್ನು ಧರೆಗೆ ತಂದೆಯೆಂದರಿದೆನಯ್ಯಾ, ಎನಗಾಗಿಯೇ ತಾನೇ ಎನ್ನ ಅರಿವಿನ ಅನುಸಂಧಾನಕ್ಕಾಗಿಯೇ ತಾನೇ, ಇದನ್ನು ಅರಿತ ನಾನು ನಿಮ್ಮ ಶರಣರ ಅರಿವಿನ ನುಡಿಗಳ ಕೇಳಿ ನಿಜ ಸುಖಿಯಾದೆ ಭವ ಪಾಶ ಹರಿದು, ಭಕ್ತನಾದೆ, ನಿಮ್ಮ ಶರಣರು ಆಚರಿಸುವ ಸದಾಚರಣೆಗಳನ್ನು ಕಂಡು ಕಂಡು ಎನ್ನೊಳಗಿನ ಅರಿವಿನ ಕಣ್ತೆರೆಯಿದು ನಾನು (ಅರಿವಿನ ಸಕಾರ ರೂಪ) ಶರಣನಾದೆ, ಭವಿತ್ವದ ಜಡತ್ವದಿಂದ ವಿಮೋಚನೆಗೊಂಡು, ಸದಾ ಹೊಸತನ ತುಂಬಿದ ಚೈತನ್ಯಾತ್ಮಕ ‘ಜಾತಿರಹಿತ ‘ ಜಂಗಮ ಬದುಕಿಗೆ ಪಾದಾರ್ಪಣೆ ಮಾಡಿದೆ ಕೂಡಲಸಂಗಮದೇವ.
(ಶರಣರ ದೃಷ್ಠಿಯಲ್ಲಿ ಪುನರ್ಜನ್ಮವೆಂಬುದು ಪೂರ್ವಾಶ್ರಮದಿಂದ ಹೊರಬಂದ ಭವಿತ್ವದಿಂದ ಭಕ್ತನಾಗಿ, ಜಡತ್ವದಿಂದ ಚೈತನ್ಯತ್ಮಕನಾಗಿ ಬದುಕುವ ಉತ್ಸಾಹದ ಅನಂತತೆಯ ಆನಂದದ ಬದುಕು)
ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.
Comments
Post a Comment