ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು, -ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ -; ಲೋಕೇಶ್_ಎನ್_ಮಾನ್ವಿ.
ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ?
ಎಂತಯ್ಯಾ ಅವರ ಯುಕ್ತರೆಂತೆಂಬೆ?
ಕೂಡಲಸಂಗದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ
✍🏾-ವಿಶ್ವಗುರು ಬಸವಣ್ಣನವರು.
ಭಾವಾರ್ಥ-
ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು.
ಅನ್ನವನ್ನು ಉಣುವಾಗ ಅದು ಯಾವ ರೈತ ಬೆಳೆದದ್ದು ಎಂಬುದು ಮುಖ್ಯವಾಗುವುದಿಲ್ಲ, ಆಗ ಅದನ್ನು ಸಂಸ್ಕರಿಸಿ ಉಣ್ಣುತ್ತಾರೆ ಕಾರಣ ಹಸಿವಿಗೆ ‘ಅನ್ನವೇ ಬ್ರಹ್ಮ’ ತದನಂತರ ಮತ್ತೆ ಜಾತಿಯ ಚರ್ಚೆ.
ಹಾಗೆಯೇ…
ಉಡುವಾಗ ಬಟ್ಟೆ ಯಾವ ರೈತನ ಹೊಲದ ಹತ್ತಿಯದ್ದು ಅದು ಮುಖ್ಯವಾಗಲ್ಲ, ಯಾವ ಜಾತಿಯವ ತಯ್ಯಾರಿಸಿದ ಅದು ಮುಖ್ಯವಾಗಲ್ಲ, ಬಟ್ಟೆ ತೊಳೆದರೆ ಅದು ಮಡಿಯಾಗುತ್ತದೆ, ಹಾಗೆಯೇ
ತಾವು ಧರಿಸುವ ಸತ್ತ ದನದ ‘ಚರ್ಮದ ಪಾದರಕ್ಷೆಯನ್ನು’ ನೀರು ಚುಮುಕಿಸಿ ಶುದ್ಧ ಮಾಡಿ ಧರಿಸಬಹುದಾದರೆ, ಪಾದರಕ್ಷೆಯನ್ನು ತಯ್ಯಾರಿಸಿದ ಜೀವಂತ ಮಾನವನನ್ನು ಜಾತಿವಿಡಿದು ಸತ್ತ ದನಕ್ಕಿಂತ ಜೀಳಾಗಿ ನೋಡುತ್ತಾರೆ,
ರೈತ ಬೆಳೆದ ಅನ್ನವನ್ನೇ ಉಣ್ಣುತ್ತಾರೆ, ಆದರೆ ಅನ್ನ ನೀಡುವ ರೈತನನ್ನು ಕೀಳಾಗಿ ಕಾಣುತ್ತಾರೆ.
ಶಿಲ್ಪಿ ಮಾಡಿದ ಚರ್ಮದ ವಸ್ತುಗಳನ್ನೇ ಬಳಸುತ್ತಾರೆ,
ಆದರೆ, ಆ ಶಿಲ್ಪಿಯನ್ನೇ ಕೀಳಾಗಿ ಕಾಣುತ್ತಾರೆ, ರೈತ ಬೆಳೆದದ್ದು ಉಣುವಾಗ ಇಲ್ಲದ ಜಾತಿ ಉಂಡ ನಂತರವೇಕೆ..?
ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ?
ಎಂತಯ್ಯಾ ಅವರ ಯುಕ್ತರೆಂತೆಂಬೆ?
ಕೂಡಲಸಂಗದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ.
ಎಷ್ಟಾದರೂ ಅವರ ವಸ್ತುಗಳು ಬೇಕು, ಅವರು ಮಾತ್ರ ಬೇಡ, ಅವರೊಂದಿಗೆ ವ್ಯವಹಾರ ಬೇಕು ಲಾಭ ಬೇಕು, ಎನ್ನುವರು, ಆದರೆ ಅವರೊಂದಿಗೆ ಉತ್ತಮ ಸಂಬಂಧ ಬೇಡವೆಂದು ಮಾರುದ್ದ ಹಾರುವರು, ಬರಿಯ ಮಾತಿಗೆ ಜಾತ್ಯಾತೀತರು ಎನ್ನುವ ನಾವುಗಳು , ಸಂಬಂಧದ ವಿಷಯದಲ್ಲಿ ದೂರ ಸರಿವೆವು, ಆದರೆ ಶರಣರ ಸಂಬಂಧಗಳು ಜಾತಿವಿಡಿದು ಆದುದವಲ್ಲ ನೀತಿವಿಡಿದು ಆದುದವು, ಅವರು ಜಾತಿವಂತರಲ್ಲ, ನೀತಿವಂತರು, ಹಂಚಿ ತಿನ್ನಲು ಹೆಸರಾದ ಕಾಗೆಗಳಲ್ಲಿಲ್ಲದ ಜಾತಿ,
ತಿಪ್ಪೆ ಕೆದರಿ ತಿಂದರು ಹಂಚಿ ತಿನ್ನುವ ಕೋಳಿಗಳಲ್ಲಿಲ್ಲದ ಜಾತಿ, ಚಿಕ್ಕ ಜೀವಿಯಾದರೂ ದೊಡ್ಡದನ್ನೇ ಕರಗಿಸಬಲ್ಲ ಅತೀ ಚಿಕ್ಕ ಜೀವಿ ಇರುವೆಗಳಲ್ಲಿಲ್ಲದ ಜಾತಿ ನಮ್ಮಲ್ಲಿದೆ, ಆದ ಕಾರಣ ಮಾನವರು ಎಷ್ಟೇ ಸಂಖ್ಯೆಯಲ್ಲಿ ಬೆಳೆದರೂ ಮಾನವನಿಗೆ ಮಾನವನ ಬುದ್ದಿಯೇ ಶತ್ರುವಾಗಿದೆ, ಅದಕ್ಕಾಗಿ ಒಟ್ಟಿಗೆ ಬಾಳಲು ಮಾದರಿಯಾಗಿ ಚಿಕ್ಕಜೀವಿ ಜೇನನ್ನೇ ಉದಾಹರಿಸುತ್ತಾರೆ,.
ಇಷ್ಟಾದರೂ ತಾನೇ ಶ್ರೇಷ್ಟನೆಂದು ಜಗದಲ್ಲಿ ಮೆರೆಯುವ ಮಾನವನ ಬಾಳುವೆ ಅದು ‘ಹೊಲತಿ ಶುದ್ಧ ನೀರ ಮಿಂದಂತೆ’
ಒಳಮನಸ್ಸಿನಲ್ಲಿ ಜಾತಿ ದ್ವೇಷ, ಧರ್ಮ ದ್ವೇಷ, ಕೆಟ್ಟ ವಿಚಾರಗಳೆಂಬ ಹಾದರ ತುಂಬಿಕೊಂಡು, ನಾನು ಶುದ್ಧನಾದೆ ಎಂದು ನೀರಲ್ಲಿ ಮಿಂದರೆ, ನೀರು ಕೊಳೆಯಾದಿತೇ ವಿನಃ ಭ್ರಾಂತುಳ್ಳ ಮಾನವನ ಮನಸ್ಸು ಶುದ್ಧವಾಗಲಾರದು, ಇಂಥಹಾ ಮಾನವರ ಬಾಳುವೆ ಹೆಂಡದ ಮಡಕೆಯ ಹೊರಗಡೆ ತೊಳೆದಂತೆ ಎಂದು ಇಡೀ ಮಾನವ ಕುಲಕೋಟಿಯನ್ನು ಎಚ್ಚರಿಸ್ಸುತ್ತಾರೆ ವಿಶ್ವಗುರು ಅಪ್ಪಬಸವಣ್ಣನವರು,.
✍🏾ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ
-9972536176
Comments
Post a Comment