ವೀರವಿರಾಗಿಣಿ ಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿ.

 ವೀರವಿರಾಗಿಣಿ ಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿ.



ಶ್ರೀ ಮಹಾಮಹಿಮನೆ ಸೋಮಶೇಖರ ಗುರುವೆ,

ಕಾಮಿತ ಫಲವ ಕೊಡು ಕಂಡಾ ಎನ್ನ| ಹೃ

ದ್ವಾಮದೊಳ್ ನಿಂದು ಮೆರೆ ಕಂಡಾ || 1 ||


ಮೊದಲು ಮಾಡುವೆ ನಾನು ಸದಮಲ ಗುರುವಿನ

ಚದುರ ಮತಿಗಳನು ಬಲಗೊಂಡು | ತತ್ವದ

ಪದಗಳನಾಂತು ಮುದದಿಂದ || 2 ||


ಜೀವ ಪರಮರ ಭೇದಭಾವವನರಿವಡೆ

ಆವಾವಮುಖದೊಳಿರುತಿಹುದೊ| ಎನ್ನಯನು

ಭಾವಕ್ಕೆ ಬಂದುದನೊರೆವೆನು || 3 ||


ಶರಣರ ನೆಲೆಗಳನ್ನು ಅರಿವಡೆ ಅಗಣಿತವು

ಹರಿಯಜ ಸುರರಿಗಳವಲ್ಲ | ವೆಂದೆನಲು

ಒರೆದೆನು ಅವರ ಕೃಪೆಯಿಂದ || 4 ||


ಎಲ್ಲ ದೇವರ ದೇವ ವಲ್ಲಭನೆ ಗುರು ಚನ್ನ

ಮಲ್ಲಿಕಾರ್ಜುನನೆ ಮನದೊಳಗೆ| ಇರು ಕಂಡಾ

ಬಲ್ಲಂತೆ ನಿಮ್ಮ ಸ್ತುತಿಸುವೆನು || 5 ||


ಆರು ಭೂತಂಗಳಲಿ ಆರಾರು ತತ್ವದಲ್ಲಿ

ಪೂರೈಸಿ ಇಪ್ಪ ಘನವನ್ನು | ಮನದಲ್ಲಿ

ಆರೈದು ತಿಳಿದಡವ ಮುಕ್ತ || 6 ||


ಮಾಘಮಾಸವುಪೋಗೆ ಮೇಗೆ ಬಂದಿತು ಚೈತ್ರ

ಬೇಗ ಮಾಮರನು ತಣ್ಣೀರೆರೆ | ಅದ ಕಂಡು

ಕೂಗಿ ಕರೆಯಿತ್ತು ಕಳಕಂಠ || 7 ||


ಆಕಾಶದೊಳಗಣ ಜ್ಯೋತಿಯ ಪ್ರಭೆ ಬಂದು

ಲೋಕಂಗಳೊಳಗೆ ಮುಸುಕಲು | ಅದರೊಳಗೆ

ಏಕಾಂಗಿಯಾದಡವ ಯೋಗಿ || 8 ||


ಒಂಬತ್ತು ವೆಜ್ಜದ ತುಂಬಿದ ಕೊಡನೊಳಗೆ

ಸಂಭ್ರಮದ ಮುತ್ತು ಇರುತಿಹುದು | ಅದರನುವ

ನಂಬಿಕಂಡವನೆ ಕಡು ಜಾಣ || 9 ||


ಅಷ್ಟದಳಕಮಲದ ಬಟ್ಟಬಯಲೊಳಗೊಂದು

ಮುಟ್ಟಬಾರದ ಘನವಿಹುದು | ಅದರೊಳಗೆ

ದೃಷ್ಟಿ ಇಟ್ಟವನೆ ನಿಜಮುಕ್ತ || 10 ||


ಕೋಡಗದ ಒಡಗೂಡಿ ಆಡುವ ನರಿನಾಯಿ

ಗೀಡಾದ ಮನೆಯ ಮುರಿದೆನು| ಮತ್ತೊಂದು

ಗೂಡಿನೊಳು ನಾನು ಮೆರೆದೆನು || 11 ||


ಒಡಹುಟ್ಟಿದೈವರ ಒಡನೆ ಶಿರಗಳ ಹರಿದು

ಮಡದಿಯ ಕರವ ಹಿಡಿದೆನು | ಮುಂದಣ

ನಡುಬಟ್ಟೆಯೊಳಗೆ ನಡೆದೆನು || 12 ||


ನುಡಿಯಬಾರದು ಹಣ್ಣು ಕಡೆಯೊಳಗಿರಲಾಗಿ

ಮಡದಿಯೋರ್ವಳು ಅದಕಂಡು | ಗ್ರಹಿಸಿ

ನುಡಿಯೊಳಗಾಗಿ ಮೆರೆಯಿತ್ತು || 13 ||


ನೂರೊಂದು ಮಣಿಗಳನು ಮೂರು ಭಾಗವ ಮಾಡಿ

ಮೂರು ಪುರುಷರಿಗೆ ಅಳವಡಿಸಿ | ಮೂವರನು

ಸೇರಿ ನಾನಳಿದು ಬಯಲಾದೆ ||14 ||


ಒಂದು ರತ್ನವು ತಾನು ಮುಂದೆ ಈರಾರಾಗಿ

ಕುಂದದೈವತ್ತು ತೆರನಾದ | ರತ್ನವು

ಸಂದಿತು ಎನ್ನ ಮನದೊಳಗೆ . || 15 ||


ಊರೊಳಗಾಡುವ ಮಾರಿಯ ಹಿಡಿತಂದು

ಭಾರಿಯ ಕೋಳ ಅಳವಡಿಸಿ | ಆ ಪುರವ

ಮಾರಿದೆ ಒಬ್ಬ ಚದುರಂಗೆ || 16 ||


ಕೋಟಿ ರವಿಶಶಿಗಳಿಗೆ ಮೀಟಿದ ಪ್ರಭೆ ಬಂದು

ನಾಟಿತ್ತು ಎನ್ನ ಕರದೊಳಗೆ | ಅದರಿಂದ

ದಾಟಿದೆನು ಭವದ ಕುಣಿಗಳನು || 17 ||


ಅಂಬರದೊಳಗಣ ತುಂಬಿದ ಕೊಡನುಕ್ಕಿ

ಕುಂಭಿನಿಯ ಮೇಲೆ ಸುರಿಯಲು | ಮಾನವರು

ಶಂಭುಲೋಕಕ್ಕೆ ತೆರಳಿದರು || 18 ||


ಮೊರೆವ ನಾದವ ಕೇಳಿ ಉರಿವ ಜ್ಯೋತಿಯ ನೋಡಿ

ಸುರಿವ ಅಮೃತವ ದಣಿದುಂಡ | ಕಾರಣವು

ತೊರೆದನು ಜನನ ಮರಣಗಳ || 19 ||


ಅಷ್ಟದಿಕ್ಕಿಲಿ ಅಷ್ಟಶಕ್ತಿಯರು ರುದ್ರರು

ಅಷ್ಟದಿಕ್ಪಾಲಗಣಗಳ | ನಡುವಿರ್ದ

ಕಟ್ಟಾಣಿ ಮುತ್ತ ಬರಸೆಳೆದೆ || 20 ||


ಒಂಬತ್ತು ದ್ವಾರದ ಇಂಬುಗಳ ಬಲಿವುತ್ತ

ತುಂಬಿ ಸುಷುಮ್ಮೆಯೋಳು ಮನವ | ನೋಡಿ

ಕುಂಭದೊಳಮೃತ ಸುರಿವುದು || 21 ||


ಆರು ಮುಖ ಮುತ್ತನು ನೀರೊಳಗೆ ಇರಿಸಲು

ನೀರಳಿದು ಮುತ್ತು ಉಳಿಯಲು | ಆ ಮಣಿಯ

ಸೇರಿಸಿದೆನೆನ್ನಯ ಉರದೊಳಗೆ || 22 ||


ಉಪ್ಪರ ಗುಡಿ ಮೇಲೆ ಸರ್ಪನು ಹೆಡೆಯತ್ತಿ

ಎಪ್ಪತ್ತು ಪುರವ ನಲಿದುಂಡು | ದಣಿಯದೆ

ಕಪ್ಪೆಯ ಶಿರವ ಮುರಿಯಿತ್ತು || 23 ||


ಹಿತ್ತಲಬಾಗಿಲ ತೆರೆದು ಸತ್ತವನ ಎಬ್ಬಿಸಿ

ಹೆತ್ತಮ್ಮನ ಕರೆವ ಪಿಡಿಯಲು| ಅವಳೀಗ

ಇತ್ತಳೈ ತನ್ನ ಪದಕವನು || 24 ||


ಕೋಣನ ಕೊಂಬಿನ ಮೇಲೆ ಮಾಣದೆ ಕಪಿಯೇರಿ

ಜಾಣೆಯ ಮನೆಯವೊಳ ಪೊಗಲು| ಅವಳೆದ್ದು

ಕೋಣನ ಕಾಲಮುರಿದಿಹಳು || 25 ||


ಹೇಮಕೂಟದ ತುದಿಗೆ ಆ ಮಹಾ ಗಜವೇರಿ

ಸೋಮನ ಕಳೆಯ ಸವಿದುಂಡು | ಮದವೇರಿ

ಕಾಮನ ಪಿಡಿದು ಬಡಿಯಿತ್ತು || 26 ||


ಪಶ್ಚಿಮ ಕೊಳದಲ್ಲಿ ಅಚ್ಚ ತಾವರೆ ಅರಳಿ

ನಿಶ್ಚಳದ ಗಂಧವೆಸೆಯಲು| ಅದಕಂಡು

ಸಚ್ಚಿತ್ತದ ಭ್ರಮರ ಎರಗಿತ್ತು || 27 ||


ನವಪುರದೊಳಗೊಂದು ನವರತ್ನ ಬೆಲೆಯಾಗೆ

ನವನಾರಿಯರು ಅದಕಂಡು | ಕೊಳಲಿಕ್ಕೆ

ಭವಸೂತ್ರ ಹರಿದು ಬಯಲಾದೆ || 28 ||


ಬೆಟ್ಟದ ಮೇಲಣ ಕಿಚ್ಚು ಸುಟ್ಟಿತು ಕಾನನವ

ಅಷ್ಟಮೃಗಜಾತಿ ಅಳಿದವು| ಅದಕಂಡು

ಬಟ್ಟಬಯಲೊಳಗೆ ಮೆರೆದೆನು || 29 ||


ಕೊಂಡಕ್ಕೆ ಬೀಳ್ವಂತ ಲಂಡಸ್ತ್ರೀಯಳು ತಾನು

ದಂಡೆಯ ಕುಣಿಕೆ ಸಡಿಲಿಸಿ | ಕೊಂಡದ

ಕೆಂಡದೊಳಾಳಿ ಮುಳುಗಿದಳು || 30 ||


ಕುಂಡಲಿಯ ಸರ್ಪನು ತುಂಡ ಮೇಲಕೆ ತೆಗೆಯ

ಮಂಡಲವು ಮೂರು ಬೆಳಗಾಗೆ | ನಡುವಳ

ಖಂಡಜ್ಯೋತಿಯಲಿ ಬಯಲಾದೆ || 31 ||


ಅಷ್ಟಾವರಣದ ಹಣ್ಣು ಬಟ್ಟ ಬಯಲೊಳಗಿರಲು

ಅಷ್ಟಾಂಗಯೋಗಗಳ ಮಾಡಿ | ಬಳಲುವರಂ

ದೃಷ್ಟಿ ಇಡುವುದನ್ನು ಮರೆವರು || 32 ||


ನೆಲನಿಲ್ಲದ ತೋಟದಲಿ ಎಲೆಯಿಲ್ಲದ ಗಿಡ ಹುಟ್ಟಿ

ಫಲವಿಲ್ಲದ ಹಣ್ಣು ತಳೆದಿರಲು| ಅದ ಕಂಡು

ಮೆಲಲಿಲ್ಲದೆ ಹೋಗಿ ಸವಿದೆನು || 33 ||


ಸಪ್ತಸಾಗರ ಬತ್ತಿ ಹತ್ತು ಹಂಸೆಯು ಸತ್ತು

ಮುತ್ತು ಮಾಣಿಕವು ತಲೆದೋರೆ| ಅದ ಕಂಡು

ಸತ್ತವನು ಎದ್ದು ಕುಣಿದನು || 34 ||


ಹತ್ತು ಸಾಗರದಲ್ಲಿ ಮತ್ತೆ ಸ್ನಾನವ ಮಾಡಿ

ಮತ್ತೊಂದು ತೆರದ ಉಣಿಸುಗಳ | ನಾನುಂಡು

ಕತ್ತಲೆಯಳಿದು ಬೆಳಗಾದೆ || 35 ||


ಕರ್ತೃ ಶ್ರೀಗುರುರಾಯ ಮುತ್ತಿನ ಕವಚವ

ಅರ್ತಿಯಿಂದೆನಗೆ ಅಳವಡಿಸೆ | ಅದರಿಂದ

ಕಿತ್ತೆನು ಮಾಯಾಬಲೆಗಳನು || 36 ||


ನಡೆವೆನು ಲಿಂಗದ ಕೂಡೆ ನುಡಿವನು ಲಿಂಗದವೊಡನೆ

ಎಡವಿಡದೆ ಬಪ್ಪ ವಿಷಯದ | ಭೋಗಂಗಳ

ಕೊಡುವೆನು ಲಿಂಗಮುಖಗಳಿಗೆ || 37 ||


ಒಂಬತ್ತು ಚೌಕದಲಿ ಉಂಬುಡುವ ಮನೆಯನ್ನು

ನಂಬದೆ ಕಡೆಗೆ ತೊಲಗಿಸಿ | ಮುಂದಣ

ಸಂಭ್ರಮದ ಮನೆಗೆ ನಡೆದೆನು || 38 ||


ಗುರುವೆನ್ನ ಕಾಯವು ಹರನೆನ್ನ ಮನವಯ್ಯ

ಪರಮ ಜಂಗಮವೆ ಅನುಭಾವ | ಮುಖವೆನ್ನ

ಇರವೆಲ್ಲ ಲಿಂಗಮಯವಯ್ಯ || 39 ||


ಉಟ್ಟ ಸೀರೆಯ ಸೀಳಿ ತೊಡಿಗೆಯ ಮುರಿದು

ಬಿಟ್ಟೆನು ನಾನು ಬಿಡುಮುಡಿಯ | ಎಲೆ ದೇವ

ಕೊಟ್ಟೆನು ಎನ್ನ ತನುಮನವ || 40 ||


ಷಟ್ಕಮಲದೊಳಗಣ ಷಡ್ವಿಧ ಲಿಂಗಕ್ಕೆ

ಷಡ್ವಿಧೇಂದ್ರಿಯಗಳ ಮುಖಮಾಡಿ | ವಿಷಯಗಳ

ಷಡ್ಭಕ್ತಿಯಿಂದ ಕೊಡುತಿಹೆನು || 41 ||


ಆಧಾರದೊಳಗಣ ಆದಿಯ ಲಿಂಗಕ್ಕೆ

ಮೇದಿನೀ ಫ್ಯಾಣಮುಖಮಾಡಿ | ಗಂಧದ

ಮೋದವ ಕೊಡುವ ನಿಜಭಕ್ತ || 42 ||


ಆರೆಸಳ ಕಮಲದಲಿ ತೋರುವ ಲಿಂಗಕ್ಕೆ

ಸಾರಜಿಹೈಗಳ ಮುಖಮಾಡಿ | ರಸಗಳ

ಪೂರೈಸಿ ಕೊಡುವ ನಿಜ ನಿಷ್ಠ || 43 ||


ಹತ್ತೆಸಳ ಕಮಲದಲಿ ಗೊತ್ತಿನ ಲಿಂಗಕ್ಕೆ

ಮತ್ತೆ ನೇತ್ರಗಳ ಮುಖಮಾಡಿ | ರೂಪಿನ

ತುತ್ತುಗಳ ಕೊಡುವ ಅವಧಾನಿ || 44 ||


ದ್ವಾದಶದಳ ಕಮಲದ ಮೋದದ ಜಂಗಮಕೆ

ಸಾದರದ ತ್ವಕ್ಕ ಮುಖಮಾಡಿ | ಸ್ಪರುಶದ

ಸ್ವಾದವ ಕೊಡುವ ಅನುಭಾವಿ || 45 ||


ಷೋಡಶದಳ ಕಮಲದಲಿ ಆಡುವ ಲಿಂಗಕ್ಕೆ

ಗಾಢದ ಶ್ರೋತ್ರ ಮುಖಮಾಡಿ | ಶಬ್ದವ

ನೀಡಿ ಕೊಡುತಿಹನು ಪರಿಣಾಮಿ || 46 ||


ದ್ವಿದಳತ್ರಿಕೂಟದಲಿ ಹುದುಗಿದ ಲಿಂಗಕ್ಕೆ

ಸದಮಲದ ಹೃದಯ ಮುಖಮಾಡಿ | ತೃಪ್ತಿಯ

ಒದಗಿ ಕೊಡುತಿಹನು ಚದುರೈಕ್ಯ || 47 ||


ಅಂಗದಾಶ್ರಯವಳಿದು ಲಿಂಗದಾಶ್ರಯವುಳಿದು

ಲಿಂಗದೊಳು ಮನವು ಒಡವರದ | ಕಾರಣವು

ಅಂಗಗುಣವೆನಗೆ ಇನಿತಿಲ್ಲ || 48 ||


ಗುರು ನಿಮ್ಮ ಚರಣವ ಮರೆಯನು, ಮರೆದಡೆ

ಪರಿಭವದ ಬಾಧೆ ಬರಲಯ್ಯಾ | ಕಡೆಯಲ್ಲಿ

ದೊರೆ ನರಕದೊಳಗೆ ತುಳಿಯಯ್ಯ || 49 ||


ನಡೆವಲ್ಲಿ ನುಡಿವಲ್ಲಿ ಉಡುವಲ್ಲಿ ಉಂಬಲ್ಲಿ

ಬಿಡೆನಯ್ಯ ನಿಮ್ಮ ಚರಣವ | ಈ ಛಲವ

ಕಡೆ ಮುಟ್ಟಿಸೆನಗೆ ಗುರುರಾಯ || 50 ||


ಘನಗುರುವೆ ನೀನೆನ್ನ ಮನದೋಳೇ ಇರು ಕಂಡ್ಯಾ

ಮನವ ಬಿಟ್ಟಿನಿತು ಅಗಲಿದಡೆ | ನಿಮಗಿನ್ನು

ಅನಘ ಶರಣರ ಅಡಿಯಾಣೆ || 51 ||


ಆವಾವ ಭೋಗಗಳ ಜೀವಭಾವದಿ ನಾನು

ಭಾವಿಸಿ ಪಿಡಿದು ಸವಿದಡೆ | ನರಕದ

ಭಾವಿಯೊಳಗದ್ದಿ ತೆಗೆಯಯ್ಯ || 52 ||


ಗುರು ಕೊಟ್ಟ ಭೋಗವನ್ನು ಗುರುವಿಗೆ ನಾನಿತ್ತು

ಗುರುಮುಖದಿಂದ ಒದಗಿದ | ಶೇಷವನು

ಇರದೆ ನಾನುಂಡು ಸುಖಿಯಾದೆ || 53 ||


ಲಿಂಗವು ಬಂದೆನ್ನ ಅಂಗದೊಳು ನೆಲಸಲು

ಅಂಗವು ಲಿಂಗದೊಳಗಾದೆ | ಕಾರಣವು

ಹಿಂಗಿದವು ಎನ್ನ ಭವಗಳು || 54 ||


ನಾನಾ ಜನ್ಮಗಳೊಳಗೆ ನಾ ತೊಳಲುತಿರಲಾಗಿ

ನೀನೆನಗೆ ಬಂದು ಕೃಪೆಯಾದ | ಕಾರಣವು

ನಾ ನಿನ್ನ ಪಾದದೂಳೆಡವರೆದೆ || 55 ||


ಹಿಂದಣ ಭವಗಳೆಲ್ಲ ಸಂದಿತ್ತು ಇಲ್ಲಿಗೆ

ಮುಂದಿನ್ನು ಎನಗೆ ಭವವಿಲ್ಲ | ಗುರುರಾಯ

ಹೊಂದಿದೆನು ನಿಮ್ಮ ಚರಣದೊಳು || 56 ||


ನಿಮ್ಮ ತೊತ್ತಿನ ತೊತ್ತು ನಿಮ್ಮ ಭೃತ್ಯರ ಭೃತ್ಯೆ

ನಿಮ್ಮಡಿಯ ನಾನು ಮರೆಹೊಕ್ಕೆ | ಘನಗುರುವೆ

ನಿಮ್ಮ ಕೃಪೆಯಿಂದ ಸಲಹಯ್ಯಾ || 57 ||


ಎನ್ನ ಕಾಯವೆ ಗುರು ಎನ್ನ ಪ್ರಾಣವೆ ಲಿಂಗ

ಎನ್ನಂತರಾತ್ಮ ಚರಲಿಂಗ | ವಾಗಲು

ಇನ್ನುಂಟೆ ಎನಗೆ ತನುಮನವು || 58 ||


ಜಯ ನಿತ್ಯ ರೂಪನೆ ಜಯ ಸತ್ಯಸದ್ಗುರುವೆ

ಜಯಭಕ್ತರರಸ ಅಘಹರನೆ | ಮದ್ಗುರುವೆ

ಜಯ ಎನ್ನ ಮನದ ತವನಿಧಿಯ || 59 ||


ನಲ್ಲಳು ನಲ್ಲನ ಸುಖವ ಎಲ್ಲರಿಗೆ ಅರುಹುವಳೆ ?

ಬಲ್ಲಡೆ ಅದರ ತೆರನಂತೆ| ಲಿಂಗಸುಖ

ಬಲ್ಲವರು ಪರರಿಗುಸುರುವರೆ || 60 ||


ಚಿನ್ನ ಬಣ್ಣಗಳಂತೆ ರನ್ನ ದೀಪ್ತಿಗಳಂತೆ

ಭಿನ್ನವಿಲ್ಲದೆ ಬೆರೆದಿಹರು | ಲಿಂಗದೊಳು

ಪನ್ನಗಧರನ ಶರಣರು || 61 ||


ಎಲ್ಲ ಭೋಗಂಗಳಲಿ ಪಲ್ಲಯಿಸಿ ಇರುವವರು

ಬಲ್ಲಡೆ ಅವರ ಪರಿಬೇರೆ |

ಶರಣರ ಖುಲ್ಲ ಮಾನವರು ಜರಿವರು || 62 ||


ಭಕ್ತರ ತೊತ್ತಾಗಿ ಇರಿಸೆನ್ನ

ಭಕ್ತರುಂಡುಳಿದ ವರಶೇಷ | ಗಳಕೊಂಬ

ನಿತ್ಯ ಸುಖವೆನಗೆ ಕೊಡು ಗುರುವೆ || 63 ||


ಎನ್ನವಗುಣಗಳ ಇನ್ನು ನೋಡದೆ ಗುರು

ಚನ್ನಮಲ್ಲೇಶ ಕೃಪೆಗೈದ | ಕಾರಣ

ಎನ್ನ ಪರಿಭವವು ಪರಿಯಿತ್ತು || 64 ||


ಬಲ್ಲವರೆ ಬಲ್ಲರು ಎಲ್ಲರಿಗೆ ತಿಳಿಯದು

ಕಲ್ಲೋಳಗೆ ಅನಲ ಇರುವಂತೆ | ಇದರನುವ

ಬಲ್ಲವರಿಗರ್ಥ ತಿಳಿವುದು || 65 ||


ಯೋಗಾಂಗ ತ್ರಿವಿಧಿಯ ರಾಗದಿಂ ಬರೆದೋದಿ

ರೋಗ ಭವಬಾಧೆ ಪರಿವುದು | ಲಿಂಗದೊಳ

ಗಾಗಿ ಸುಖದಿಂದ ಮೆರೆವರು || 66 ||


ಗುರುಚನ್ನಮಲ್ಲನ ವರಕೃಪಾರಸವೆನ್ನ

ಶರೀರವ ತುಂಬಿ ಹೊರಸೂಸೆ | ಅದರಿಂದ

ಬರೆದೆನು ಬಲ್ಲ ಪರಿಯಲ್ಲಿ || 67 ||


ಮಂಗಳಾರತಿ


ಕಂಗಳ ನೋಟವು ಕಾಯದ ಕರದಲಿ

ಲಿಂಗದ ಕೂಟವು ಶಿವ ಶಿವ ಚೆಲುವನು

ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆ

ನಾರತಿಯ, ಬೆಳಗುವೆನಾರತಿಯ ||ಪ||


ಜಗವಂದ್ಯಗೆ ಬೇಟವ ಮಾಡಿದೆ ನಾ

ಹಗೆಯಾದೆನು ಸಂಸಾರಕ್ಕೆಲ್ಲಾ

ನಗುತೈದರೆ ಲಜ್ಜೆಯ (ನಾಚಿಕೆಯನು) ತೊರೆದವಳೆಂದೆನ್ನ|

ಗಗನ ಗಿರಿಯ ಮೇಲಿರ್ದಹನೆಂದಡೆ

ಲಗುನೆಯಾಗಿ ನಾನರಸುತ ಬಂದೆನು

ಅಘಹರ ಕರುಣಿಸು ನಿಮಗಾನೊಲಿದೆನು

ಮಿಗೆ ಒಲಿದಾರತಿಯ || 1 ||


ಭಕುತಿ- ರತಿಯ ಸಂಭಾಷಣೆಯಿಂದವೆ

ಮುಕುತಿಯ ಮರೆದೆನು, ಕಾಯದ, ಜೀವದ

ಪ್ರಕೃತಿಯ ತೊರೆದೆನು ಸುತ್ತಿದ ಮಾಯಾಪಾಶವ ಹರಿದೆನಲಾ|

ಸುಕೃತಿಯಾಯ್ತು ನಿಮ್ಮಯ ನೆನಹಿಂದವೆ

ಮುಕುತಿಯ ಫಲಗಳ ದಾಂಟಿಯ ಬಂದೆನು

ಶಕುತಿಯಾದನಾಪ್ರಾಣಲಿಂಗಕೆ

ಮನವೊಲಿದಾರತಿಯ || 2 ||


ಮೆಚ್ಚಿ ಒಲಿದು ಮನವಗಲದ ಭಾವವು

ಬಿಚ್ಚದೆ ಬೇರೆಂದೆನಿಸದ ಪ್ರಾಣವು

ಬೆಚ್ಚಂತಿರ್ದುದು ಅಚ್ಚೊತ್ತಿದ ಮಹಾಘನ ತಾ ನೆಲೆಗೊಂಡು

ಪಶ್ಚಿಮ ಮುಖದಲಿ ಬೆಳಗುಪ್ರಕಾಶವು

ನಿಚ್ಚನಿರಂಜನ ಚನ್ನ ಮಲ್ಲಿಕಾರ್ಜುನ

ದೇವಂಗೆತ್ತುವೆನಾರತಿಯಾ ಮನವೊಲಿದಾರತಿಯಾ || 3 ||



Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’