ರಾಯಚೂರು ಜಿಲ್ಲೆಯ ಶರಣರು -4 ಮಹಾಶರಣೆ ಮುಕ್ತಾಯಕ್ಕ.

 🌼ರಾಯಚೂರು ಜಿಲ್ಲೆಯ ಶರಣರು- 4

🔶ಮಹಾಜ್ಞಾನಿ ಶರಣೆ ಮುಕ್ತಾಯಕ್ಕ.


ಅನುಭಾವದ ನೆಲೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿದ ಶರಣೆ, ಇವರ ತವರೂರು ಗದಗ ಜಿಲ್ಲೆಯ ಲಕ್ಕುಂಡಿ,

ಗಂಡನ ಊರು ಹಾಗೂ ಇವರು ಐಕ್ಯವಾದ ಸ್ಥಳ : ಇಂದಿನ ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಮೊಸುಳೆಕಲ್ಲು( ಮೊಸರುಕಲ್ಲು) ಗ್ರಾಮ

ಇವರ ಕಾಲ-1160

ಅಂಕಿತನಾಮ - ಅಜಗಣ್ಣತಂದೆ,

ಪ್ರಸ್ತುತ ಲಭ್ಯವಿರುವ ವಚನಗಳು- 37

ಕಾಯಕ - ಹೈನುಗಾರಿಕೆ.

ಆದ್ಯರ ಅರವತ್ತು ವಚನಕ್ಕೆ 

ದಣ್ಣಾಯಕರಿಪ್ಪತ್ತು ವಚನ,

ದಣ್ಣಾಯಕರ ಇಪ್ಪತ್ತು ವಚನಕ್ಕೆ

ಪ್ರಭುದೇವರ ಹತ್ತುವಚನ,

ಪ್ರಭುದೇವರ ಹತ್ತು ವಚನಕ್ಕೆ

ಅಜಗಣ್ಣನ ಐದು ವಚನ,

ಅಜಗಣ್ಣನ ಐದು ವಚನಕ್ಕೆ

ಕೂಡಲಚೆನ್ನಸಂಗಮದೇವಾ,

ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.

ಅಜಗಣ್ಣನ ವಚನವೆಂದರೆ ಅದು ಅತ್ಯಂತ ಅರ್ಥಪೂರ್ಣ, ಉತ್ಕೃಷ್ಟ ಆಧ್ಯಾತ್ಮಿಕ ನೆಲೆಯ ವಚನಗಳಾಗಿವೆ ಎಂಬುದನ್ನು ಮೇಲಿನ ವಚನದಲ್ಲಿ ಚೆನ್ನಬಸವಣ್ಣನವರು ತಿಳಿಸುತ್ತಾರೆ.

ಅಜಗಣ್ಣ ಮುಕ್ತಾಯಕ್ಕನಿಗೆ ಬರಿ ಅಣ್ಣ ಮಾತ್ರವಲ್ಲ, ಆಕೆಯ ಗುರುವಾಗಿ ನಿಂತವನು, ಐಕ್ಯಸ್ಥಲದ ಶರಣ ಅಜಗಣ್ಣ. ಅಜ, ಎಂದರೆ ಜ್ಞಾನ, ಗಣ್ಣ, ಎಂದರೆ ಕಣ್ಣು, ಅಜಗಣ್ಣ ಅದ್ವಿತೀಯ ಜ್ಞಾನ ಸಾಧಕನಾಗಿದ್ದು ಅಷ್ಟೇ ತನ್ನ ಭಕ್ತಿಯನ್ನು ಹೊರಗಡೆತೋರುಗೊಡದೆ, ನಿರಾಡಂಬರ ಭಾವಲಿಂಗ ಪೂಜಕನಾಗಿ, ಗುಪ್ತಭಕ್ತನಾಗಿದ್ದ, ಆತನ ಅಂತರಂಗವು ಸದಾ ಲಿಂಗಧ್ಯಾನದಲ್ಲೇ ಇರುತ್ತಿತ್ತು

ಅಂಕಿತನಾಮ : ಮಹಾಘನಸೋಮೇಶ್ವರಾ.

ಪ್ರಸ್ತುತ ಲಭ್ಯವಿರುವ ವಚನಗಳು : 10.

ಕಾಯಕ : ವ್ಯವಸಾಯ.

ಸಜ್ಜನವೆ ಮಜ್ಜನ, ಸದಾಚಾರವೆ ಧೂಪಾರತಿ,

ಆ ಗಮನವೆ ಪೂಜೆಯಾಗಿ ಅಂಗವಿರಹಿತವಾದಲ್ಲಿ

ಉದಯಾಸ್ತಮಾನವಿಲ್ಲದ ಲಿಂಗಾರ್ಚನೆ,

ಮಹಾಘನಸೋಮೇಶ್ವರಾ, ನಿಮ್ಮ ಶರಣಂಗೆ.

ಅಂತರಂಗದ ಪೂಜೆಗೆ ಮೀಸಲಾದ ಶರಣರಿಗೆ, ಬಹಿರಂಗದ ಅರ್ಚನೆ ಪೂಜೆ ಬೇಕಿಲ್ಲ, ತಾನು ಕಳೆಯುವ ಸಮಯವೆಲ್ಲವೂ ಲಿಂಗಮಯವಾಗಿ, ಹಗಲು ಇರುಳು ಎನ್ನದೇ ಎಲ್ಲವು ಏಕವಾಗದ, ಶರಣನ ಜೀವನವೇ ಶಿವಯೋಗವು ಎನ್ನುತ್ತಾರೆ ಅಜಗಣ್ಣನವರು. ಇವರ ಸೋದರ ಮಾವನು ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುತ್ತಾನೆ, ಆದರೂ ಅಂತರ್ಮುಖಿ ಶರಣ, ಅಂತರಂಗದಲ್ಲೇ ಶಿವಧ್ಯಾನ ಮಾಡುತ್ತಿರುತ್ತಾನೆ, ಜನರು ಈತನನ್ನು ಎಷ್ಟೇ ಗೇಲಿ ಮಾಡಿದರೂ ಮೌನವಾಗಿರುತ್ತಿದ್ದ, ಸಾತ್ವಿಕ ವ್ಯಕ್ತಿತ್ವದ ಶರಣ ಅಜಗಣ್ಣ. ಯಾವುದೇ ಬಹಿರಂಗದ ವಿಚಾರಗಳಿಗೆ ಒತ್ತುಗೊಂಡದ ಈತನನ್ನು ಜನ ಬುದ್ದಿಮಾಂದ್ಯನೆಂದು ಭಾವಿಸಿದ್ದರು, ತಮ್ಮ ಕೆಲಸ ಕಾರ್ಯಗಳಿಗೆ ಈತನ ಸಹಾಯ ಕೇಳುತ್ತಿದ್ದರು. ಇನ್ನೊಂದು ಕಡೆ, ತಾನು ಪ್ರೀತಿಯಿಂದ ಸಾಕಿ ಬೆಳೆಸಿದ ತನ್ನ ತಂಗಿಯನ್ನು ಈಗಿನ ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಮೊಸುಳೆಕಲ್ಲು ಗ್ರಾಮದ ವರನಿಗೆ ಕೊಟ್ಟು ವಿವಾಹ ಮಾಡುತ್ತಾನೆ, ತನ್ನ ತಂಗಿ ಊರಿಗೆ ಬಂದು, ತಂಗಿ ಮುಕ್ತಾಯಿಗೆ ಹೈನುಗಾರಿಕೆ ಮಾಡಲು ಉತ್ತೇಜಿಸುತ್ತಾನೆ, ಅಂದಿನ ದಿನಮಾನದಲ್ಲಿ ಮೊಸುಳೆಕಲ್ಲು ಗ್ರಾಮಕ್ಕೆ ಇವರ ಹೈನುಗಾರಿಕೆ ಹೆಸರುವಾಸಿಯಾಗಿತ್ತು, ಹಾಲನ್ನು ಮಾರಾಟ ಮಾಡಿದರೆ, ಬಿಸಿಲ ಜಿಲ್ಲೆಯಾದ್ದರಿಂದ ಮಜ್ಜಿಗೆಯನ್ನು ಜನರಿಗೆ ಉಚಿತವಾಗಿಯೇ ನೀಡುತ್ತಿದ್ದಳು, ಅದಕ್ಕಾಗಿಯೇ ಇವರನ್ನು ಇಂದಿಗೂ ಜನರು ಮಜ್ಜಿಗೆ ಮಾಳಮ್ಮ ಎಂದು ಜನ ಗುರುತಿಸುತ್ತಾರೆ. ಜನಪದರ ಸಾಹಿತ್ಯದಲ್ಲೂ ಇವರ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಮಾಸಾಳ ಊರಾಗ ಶಿವಭಕ್ತರ ಮನಿಯಾಗ ಖುಷಿಯಾಗಿ 

ತಂಗಿಗಿ ಕೊಟ್ಟಾನ | ಮುಕ್ತಾಯಿ ಹಸನಾಗಿ ಬದುಕ ಮಾಡ್ಯಾಳ||" 

"ಆಕಳ ಬಿಟಕೊಂಡು ಹೊಲಕ ತಾ ಬರತಾಳ 

ಮೂಕಾಗಿ ಆಕಳ ಕಾಯ್ದಾಳ | ಮುಕ್ತಾಯಿ

ಮುಕ್ಕಣ್ಣನ ಧ್ಯಾನ ಮಾಡ್ಯಾಳ" ಎಂಬಲ್ಲಿ ಮುಕ್ತಾಯಕ್ಕ ಹೈನುಗಾರಿಕೆ ಮಾಡುತ್ತಿದ್ದಳು ಎಂಬುದು ಜಾನಪದರಿಂದ ಸ್ಪಷ್ಟವಾಗುತ್ತದೆ, ಅಣ್ಣ ಅಜಗಣ್ಣನು ಮರಳಿ ಲಕ್ಕುಂಡಿಗೆ ಹೋಗುವಾಗ ತಂಗಿ ಕೇಳುತ್ತಾಳೆ, ನೀನೋ ಮೌನವಾಗಿರುತ್ತಿಯಾ, ನಿನ್ನ ಬಗ್ಗೆ ನಿನ್ನ ಆಗು ಹೋಗುಗಳ ಬಗ್ಗೆ, ನನಗೆ ಹೇಗೆ ತಿಳಿಯಬೇಕಣ್ಣ ಎಂದು ಕೇಳಿದಾಗ, ಆಗ, ಅಜಗಣ್ಣ ಹೇಳುತ್ತಾನೆ, “ತಂಗಿ ನಿನ್ನ ಮನಿಯ ಹಿತ್ತಲದೊಳಗೆ ಮಲ್ಲಿಗೆಯ ಗಿಡ ಹಚ್ಚು. ಯಾವಾಗ ಆ ಗಿಡ ಒಣಗುವುದೊ ಆವಾಗ ನನ್ನ ಅವಸಾನ ಅಂತ ತಿಳಿದುಕೋ” ಎನ್ನುತ್ತಾರೆ. ಇದು ಹಲಗೆ ಆರ್ಯನ ಶೂನ್ಯ ಸಂಪಾದನೆ. ಆದರೆ, ಇನ್ನು ಸಿದ್ಧನಂಜೇಶರ ಗುರುರಾಜ ಚಾರಿತ್ರ್ಯದಲ್ಲಿಯೂ ಮುಕ್ತಾಯಕ್ಕ, “ನಿನ್ನ ಅವಸಾನದ ಕುರುಹು ಏನು?” ಎನ್ನುತ್ತಾರೆ. “ನೀನುಟ್ಟ ಸೀರೆಯ ನಿರಿಗೆ ಕಳಚಿದಾಗ, ತೋರಮುಡಿ ಕಳಚಿದಾಗ, ಕಡೆಯುವ ಮೊಸರು, ಕಲ್ಲು ಆದಾಗ ನನ್ನ ಅವಸಾನವಾಯಿತೆಂದು ತಿಳಿ” ಎಂದು ವಿವರಿಸಲಾಗಿದೆ. ಹೀಗೆ ಅಜಗಣ್ಣನು ಲಕ್ಕುಂಡಿಗೆ ಬಂದು ನೆಲೆಸುತ್ತಾನೆ, ಒಂದು ದಿನ, ಭಾರವಾದ ಧಾನ್ಯಗಳ ಮೂಟೆ ಹೊತ್ತು ಮನೆಯೊಳಗೆ ಬರುವಾಗ ಮನೆಯ ಹೊಸ್ತಿಲು ಹಣೆಗೆ ತಾಕಿ, ಆತನ ಬಾಯಿಂದ ನಮಃ ಶಿವಾಯ ಓಂ ಎಂಬ ಮಂತ್ರವು ಹೊರ ಹೊಮ್ಮುತ್ತದೆ, ಆತನ ಗುಪ್ತಭಕ್ತಿಯು ಹೊರಬಂದ ಕ್ಷಣದಲ್ಲೇ ಆ ನಮಃ ಶಿವಾಯ ಓಂ ಎಂದ ಒಂದೇ ಶ್ವಾಸದಲ್ಲೇ ಅವರ ಪ್ರಾಣವು ಮಹಾಲಿಂಗದಲ್ಲಿ ಬಯಲಾಗುತ್ತದೆ, ಇತ್ತ ಮುಕ್ತಾಯಕ್ಕನಿಗೆ ಅಣ್ಣನ ಅವಸಾನದ ಬಗ್ಗೆ ತಿಳಿದು ತಾನು ಹೋಗುವಷ್ಟರಲ್ಲಿ ಅಣ್ಣನ ಪ್ರಾಣ ಮಹಾಲಿಂಗದಲ್ಲಿ ವಿಲೀನವಾಗಿರುತ್ತದೆ, ಇದನ್ನು ಕಂಡ ಮುಕ್ತಾಯಕ್ಕ, ನನ್ನಣ್ಣನ ಅರಿವು ಮತ್ತು ಜ್ಞಾನವನ್ನರಿಯದ ಜನ ಆತನನ್ನು ನೆನೆಸಿಕೊಂಡ ಬಗ್ಗೆ ಬೇಸರ ಪಡುತ್ತಾಳೆ. ಹಾಗೂ ತನ್ನ ಗುರುಸ್ವರೂಪಿ ಅಣ್ಣನ ಜ್ಞಾನದ ಶಿರವನ್ನು ತನ್ನ ತೊಡೆಯ ಮೇಲಿರಿಸಿ ಮಗುವಿನಂತೆ ಮಲಗಿಸಿಕೊಂಡು, ಅಲೌಕಿಕದ, ಆಧ್ಯಾತ್ಮದ ಗುರು ನೀನು ಹೋದರೆ ನನಗೆ ಭಕ್ತಿಯ ಮಾರ್ಗ ತೋರುವವರಾರು ಎಂದು ಅಳುತ್ತಿರುತ್ತಾಳೆ.

ಶೂನ್ಯಸಂಪಾದನೆಯಲ್ಲಿ ಬರುವ ಸನ್ನಿವೇಶದ ವಚನಗಳು ಹೀಗಿವೆ.. 

ಮುಕ್ತಾಯಕ್ಕ:

ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು.

ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು. ನಾನೆಂತು ಬದುಕುವೆನಣ್ಣಾ? ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು. ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣ ನಿನ್ನ ಯೋಗ.

ಬರಿಯ ಬಾಹ್ಯದ ಭ್ರಮೆಯಲ್ಲಿ ಈ ಲೋಕವೇ ಕೆಟ್ಟಿತ್ತು, ಅಂತರಂಗದ ನಿಜದ ಅರಿವನ್ನು ತೋರುವುದೇ ಎನ್ನ ಅಜಗಣ್ಣನ ನಿಜ ಯೋಗವಾಗಿತ್ತು ಎನ್ನುತ್ತಾ, 

ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು. ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು. ದರ್ಪಣದೊಳಗೆ ಪ್ರತಿಬಿಂಬದಂತೆ ಹಿಡಿವರಿಗಳವಲ್ಲದಿರಬೇಕು ಅಣ್ಣಾ, ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ ಆರೂಢಗೆಟ್ಟೆಯೊ ಅಜಗಣ್ಣಾ.

ಇದ್ದು ಇಲ್ಲದಂತೆ, ಸದ್ದುಗದ್ದಲವಿಲ್ಲದೆ ಸಾಧನೆ ಮಾಡಿದ ನಿನ್ನ ಅಂತರಂಗದ ಧ್ವನಿಯೇ ಎನಗೆ ಗುರುವಾಗಿ ಸತ್ಯದ ಮಾರ್ಗ ತೋರುತ್ತಿತ್ತು ಎಂದು ಅಳುತ್ತಿರುತ್ತಾಳೆ.

ಆಗ ಅಲ್ಲಮಪ್ರಭುಗಳು ಹೀಗೆ ಕೇಳುತ್ತಾರೆ,

ಅಂಗೈಯೊಳಗೊಂದು ಅರಳ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ?

ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವ ಪರಿತಾಪವೇನು ಹೇಳಾ? ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ ಅರಿವಿನೊಳಗಣ ಮರಹಿದೇನು ಹೇಳಾ? ದುಃಖವಿಲ್ಲದ ಅಕ್ಕೆ ಅಕ್ಕೆಯಿಲ್ಲದ ಅನುತಾಪ.

ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ, ನೀನಾರೆಂದು ಹೇಳೆ ಎಲೆ ಅವ್ವಾ? ಎಂದಾಗ 

ಮುಕ್ತಾಯಕ್ಕ: 

ಆರೆಂದು ಕುರುಹ ಬೆಸಗೊಳಲು ಏನೆಂದು ಹೇಳುವೆನಯ್ಯಾ? ಕಾಯದೊಳಗೆ ಮಾಯವಿಲ್ಲ; ಭಾವದೊಳಗೆ ಭ್ರಮೆಯಿಲ್ಲ. ಕರೆದು ಬೆಸಗೊಂಬಡೆ ಕುರುಹಿಲ್ಲ.

ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು ನಿರ್ಬುದ್ದಿಯಾದವಳನೇನೆಂಬೆನಣ್ಣಾ? ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿ ಎನ್ನ ಅಜಗಣ್ಣತಂದೆಯ ಬೆನ್ನ ಬಳಿಯವಳಾನಯ್ಯಾ

ಅಲ್ಲಮ ಪ್ರಭು:

ಕಾಣದುದ ಕಂಡೆ ಕೇಳದುದ ಕೇಳಿದೆ

ಮುಟ್ಟಬಾರದುದನ್ನು ಮುಟ್ಟಿದೆ

ಅಸಾಧ್ಯವ ಸಾಧಿಸಿದೆ, ತಲೆಗೆಟ್ಟುದ

ತಲೆವಿಡಿದೆ, ನೆಲೆಗಟ್ಟುದನಿರ್ಧರಿಸಿದೆ

ಗುಹೇಶ್ವರಾ ನಿಮ್ಮ ಶರಣ

ಅಜಗಣ್ಣನಿಗೆ ಶರಣೆಂದು ಬದುಕಿದೆನು

ಎಂಬ ಅಲ್ಲಮರ ನುಡಿಕೇಳಿ

ಎಲ್ಲರಂತೆ ಬಾಹ್ಯ ಆಡಂಬರವಾಗಿ ಬದುಕಲಿಲ್ಲ, ಲೌಕಿಕ ವಿಷಯಂಗಳಿಗೆ ಕುದಿಯದೆ, ಎಲ್ಲರಂತೆ ಐಕ್ಯವಾಗದೇ ಅವಿರಳ ನಿಜೈಐಕ್ಯನಾದ ಎನ್ನ ಅಣ್ಣನನ್ನು ಕಂಡು ಶರಣೆಂಬಾತ ನೀನಾರು ಎಂದು ಕೇಳುತ್ತಾಳೆ ಮುಕ್ತಾಯಕ್ಕ: 

ಸಚ್ಚಿದಾನಂದ ಸ್ವರೂಪನಾದ

ವಾಙ್ಮನಕ್ಕಗೋಚರವಾದ

ಜ್ಞಾನಶಕ್ತಿಯನೊಳಗೊಂಡು ನಿಂದ

ಜಂಗಮವೆ ಅಂಗಪ್ರಾಣವಾದ

ಶರಣರನೊಳಕೊಂಡು ಚಿದ್ಘನದೊಳಗೆ

ಅವಿರಳೈಕ್ಯವಾದ ಎನ್ನ ಅಜಗಣ್ಣ ತಂದೆಯನರಿದು

ಶರಣೆಂಬಾತ ನೀನಾರು ಹೇಳಯ್ಯಾ

ಆಗ ಅಲ್ಲಮಪ್ರಭುಗಳು:

ಶರಣು ಶರಣಾರ್ಥಿ ಎಲೆ ತಾಯೆ

ಧರೆಯಾಕಾಶಮನೆಗಟ್ಟದಂದು

ಹರಿವ ಅನಿಲ ಅಗ್ನಿ ಜಲ

ಮೊಳೆದೋರದಂದು ಹುಟ್ಟಿದಳೆಮ್ಮವ್ವೆ

ಅದಕ್ಕೆ ಮುನ್ನವೆ ಹುಟ್ಟದೆ

ಬೆಳೆದೆನೆಮ್ಮಯ್ಯ, ಈ ಇಬ್ಬರ

ಬಸುರಲ್ಲಿ ಬಂದೆನಾನು

ಎಮ್ಮ ತಂಗಿಯರೈವರು

ಮೊರೆಗೆಟ್ಟು ಹೆಂಡಿರಾದರೆನಗೆ

ಕಾಮಬಾಣ ತಾಗದೆ ಅವರ

ಸಂಗವ ಮಾಡಿದೆನು ನಾ ನಿಮ್ಮ

ಭಾವನಲ್ಲಯ್ಯನು ನೀನೆನಗೆ ನೆಗೆವೆಣ್ಣು

ನಮ್ಮ ಗುಹೇಶ್ವರನ ಕೈವಿಡಿದು

ಪರಮ ಸುಖಿಯಾಗಿ ಕಳವಳದ

ಕಂದರವೆಯೇನು ಹೇಳಾ

ಎಂದು ಮಾರ್ಮಿಕವಾಗಿ ನುಡಿಯುತ್ತಾ ಹೀಗೆ ಹೇಳುತ್ತಾರೆ,

ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ; ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು. ಇಂತು, ಚೈತನ್ಯಾತ್ಮಕನೆ ಚಿತ್‌ಸ್ವರೂಪನೆಂದರಿಯ ಬಲ್ಲಡೆ ಆತನೆ ಶರಣ ಗುಹೇಶ್ವರಾ.

ಆಗ ಮುಕ್ತಾಯಕ್ಕ: 

ದೇವ ದೇವ ಶರಣು ಶರಣಾರ್ಥಿ, ಅವಧರಿಸಯ್ಯಾ.

ಕೇಳಿದ ಸುಖ ಕಿವಿಗೆ ಬೇಟವಾಯಿತ್ತು.

ಕಿವಿಗಳ ಬೇಟ ಕಂಗಳಮುಂದೆ ಮೂರ್ತಿಗೊಂಡಿತ್ತು.

ಕಂಗಳ ಮುಂದೆ ಕಂಡ ಸುಖವು ಮನಕ್ಕೆ ವೇದ್ಯವಾಯಿತ್ತು.

ಶಿವಶರಣರ ದರುಶನದ ಸುಖವೇನೇನೆಂದೆನಬಹುದು?

ಮದವಳಿದು ಮಹವನೊಡಗೂಡಿದ ಎನ್ನ ಅಜಗಣ್ಣನಗಲಿದ ದುಃಖ

ನಿಮ್ಮ ಸಂಗದಲ್ಲಿ ಸಯವಾಯಿತ್ತು ಕಾಣಾ ಪ್ರಭುವೆ.

ಅಲ್ಲಮಪ್ರಭುಗಳು: 

ಅರಿವರತು ಮರಹುಗೆಟ್ಟು ತನ್ನಲ್ಲಿ ತಾನು ಸನ್ನಹಿತನಾದವಂಗೆ ದುಃಖಿಸುವರೆ ಹೇಳಾ? ಶೋಕಿಸುವರೆ ಹೇಳಾ? ಒಡಲಿಲ್ಲದಾತಂಗೆ ಎಡೆಯಲೊಂದು ಅಳಿವುಂಟೆಂದು ನುಡಿದು ಹೇಳುವ ಮಾತು ಭ್ರಾಂತು ನೋಡಾ! ಎರಡಿಲ್ಲದ ಐಕ್ಯಂಗೆ ಒಳಹೊರಗಿಲ್ಲ ನೋಡಾ, ಗುಹೇಶ್ವರನ ಶರಣ ಅಜಗಣ್ಣಂಗೆ!

ಮುಕ್ತಾಯಕ್ಕ:

ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ, ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ.

ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ, ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ, ಎನ್ನ ಅಜಗಣ್ಣನ ಯೋಗಕ್ಕೆ.

ಅಲ್ಲಮಪ್ರಭುಗಳು:

ಅಳಿವನಲ್ಲ ಉಳಿವನಲ್ಲ, ಘನಕ್ಕೆ ಗಮನನಲ್ಲ, ಮನಕ್ಕೆ ಸಾಧ್ಯನಲ್ಲ, ತನ್ನ ತಪ್ಪಿಸಿ ಇದಿರನೊಪ್ಪಿಸಿಹೆನೆಂಬ ಭಿನ್ನಭಾವಿಯಲ್ಲ, ಗುಹೇಶ್ವರನ ಶರಣ ಅಜಗಣ್ಣನ ಅಂತಿಂತೆನಬಾರದು ಕೇಳಾ ತಾಯೆ.

ಮುಕ್ತಾಯಕ್ಕ:

ಅಂಬರದಲಾಡುವ ತುಂಬಿಯ ಬಿಂಬದ ಕಂಬನಿಯೊಳಗಣ ರತ್ನದ ಬಯಕೆಯಾದ್ಯಂತವನೇನೆಂಬೆನಯ್ಯಾ? ವೇದ ಶಾಸ್ತ್ರ ಶೃತಿ ಸ್ಮೃತಿಗಳು ಸ್ತುತಿಸಲರಿಯವು. ನಾದವಲ್ಲ, ಸುನಾದದ ನಿಲವಲ್ಲ ಭೇದಿಸುವಡೆ ಅಗಮ್ಯ ನೋಡಾ! ಸೋಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು? ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು?

ಅಲ್ಲಮಪ್ರಭುಗಳು:

ಕಂಡೆನೆಂಬುದು ಕಂಗಳ ಮರವೆ, ಕಾಣೆನೆಂಬುದು ಮನದ ಮರವೆ, ಕೂಡಿದೆನೆಂಬುದು ಅರುಹಿನ ಮರವೆ, ಅಗಲಿದೆನೆಂಬುದು ಮರಹಿನ ಮರವೆ, ಇಂತು, ಕಂಡೆ-ಕಾಣೆ, ಕೂಡಿದೆ-ಅಗಲಿದೆ ಎಂಬ, ಭ್ರಾಂತಿಸೂತಕವಳಿದು ನೋಡಲು ಗುಹೇಶ್ವರಲಿಂಗವನಗಲಲೆಡೆಯಿಲ್ಲಾ ಕೇಳಾ, ಎಲೆ ತಾಯೆ.

ಮುಕ್ತಾಯಕ್ಕ:

ಕಣ್ಣ ಮೊದಲಲ್ಲಿ ಕುಳ್ಳಿರ್ದು ಬಣ್ಣದೋರುವ ಪರಿಯ ನೋಡು ಅವ್ವಾ.

ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದನು. ಈ ಅಜಗಣ್ಣನ ಯೋಗಕ್ಕೆ ಬೆರಗಾದೆನವ್ವಾ.

ಈ ಅರಿವೆಂತುಟೆಲ್ಲವನೊಳಗಿಟ್ಟುಕೊಂಡನು, ಶಿವಗಣಸಂಚ ಶಿವಯೋಗಿ ಅಜಗಣ್ಣದೇವನು.

ಎಂದು ಹೇಳುತ್ತಾ ಮತ್ತೆ ಮುಂದುವರಿದು.

ತನುವಿಡಿದೆನಾಗಿ ಅನುವರಿಯದೆ ಕೆಟ್ಟೆನು.

ಮನವಿಡಿದೆನಾಗಿ ಅರಿವು ಉಳಿಯದೆ ಕೆಟ್ಟೆನು. ಭಾವದ ಬಯಕೆ ಹಿಂಗದಾಗಿ ವಿಯೋಗಿಯಾಗಿ ಕೆಟ್ಟೆನು.

ಅರಿವ ನುಡಿದು ಮರಹಿಗೊಳಗಾದೆನು. ಎನ್ನ ಕಾಣದೆ ಭಿನ್ನಜ್ಞಾನಿಯಾದೆನು. ಅಜಗಣ್ಣನೆಂಬ ಮಹಿಮನು ಘನವೇದ್ಯನಾಗಿ

ಎನ್ನ ಮತಿಗೆ ಮರವೆಯ ಮಾಡಿ ಹೋದನು.

ಅಲ್ಲಮಪ್ರಭುಗಳು:

ತನು ಉಂಟೆಂದಡೆ ಪಾಶಬದ್ಧ.

ಮನ ಉಂಟೆಂದಡೆ ಭವಕ್ಕೆ ಬೀಜ.

ಅರಿವ ನುಡಿದು ಕೆಟ್ಟೆನೆಂದರೆ ಅದೇ ಅಜ್ಞಾನ.

ಭಾವದಲ್ಲಿ ಸಿಲುಕಿದೆನೆಂಬ ಮಾತು ಬಯಲ ಭ್ರಮೆ ನೋಡಾ. ಒಮ್ಮೆ ಕಂಡೆ-ಒಮ್ಮೆ ಕಾಣೆ, ಒಮ್ಮೆ ಕೂಡಿದೆ-ಒಮ್ಮೆ ಅಗಲಿದೆ

ಎಂದಡೆ ಕರ್ಮ ಬೆಂಬತ್ತಿ ಬಿಡದು.

ನಿನ್ನೊಳಗೆ ನೀ ತಿಳಿದು ನೋಡಲು ಭಿನ್ನವುಂಟೆ? ಗುಹೇಶ್ವರಲಿಂಗವನರಿವಡೆ ನೀನೆಂದೇ ತಿಳಿದು ನೋಡಾ ಮರುಳೆ?

ಮುಕ್ತಾಯಕ್ಕ:

ಅರಿವ ನೆಲೆಗೊಳಿಸಿ ಎರಡಳಿದೆನೆಂಬವರು ಶಿಶುಕಂಡ ಕನಸಿನಂತಿರಬೇಕಲ್ಲದೆ, ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ?ಅರಿವರತು ಮರಹು ನಷ್ಟವಾಗಿ ಗುರುವ ತೋರಿದೆನೆಂಬರು, ಇದಿರಿಂಗೆ ಕರುಳಕಲೆಯನರುಹುವ ಪರಿಯೆಂತು ಹೇಳಾ? ಮನದ ಕೊನೆಯ ಮೊನೆಯ ಮೇಲಣ, ಅರಿವಿನ ಕಣ್ಣಮುಂದೆ ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗಬಲ್ಲನೆ? ನೆರೆಯರಿತು ಮರೆಯಬಲ್ಲಡೆ ಎನ್ನ ಅಜಗಣ್ಣನಂತೆ ಶಬ್ದಮುಗ್ಧನಾಗಿರಬೇಕಲ್ಲದೆ, ಶಬ್ದಸಂದಣಿಯ ಮಾತು ಸಯವಲ್ಲ ನೋಡಯ್ಯಾ.

ಅಲ್ಲಮಪ್ರಭುಗಳು:

ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ. ತಾಳೋಷ್ಟ್ರಸಂಪುಟವೆಂಬುದು ನಾದಬಿಂದುಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲಾ ಕೇಳಾ ಮರುಳೆ.

ಮುಕ್ತಾಯಕ್ಕ:

ತನುವಿನೊಳಗೆ ತನುವಾಗಿ, ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ ಕೆಲಬರಿಗೆ ಅರಿಯಬಪ್ಪುದೆ? ಅಂತರಂಗದೊಳಗೆ ಅದೆ ಎಂದಡೇನು? ಮನ ಮುಟ್ಟುವನ್ನಕ್ಕರ ಕಾಣಬಾರದು. ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು. ಎನ್ನ ಮನದೊಳಗೆ ಘನವನನುಗೊಳಿಸಿ ತೋರುವರಿಲ್ಲದ ಕಾರಣ ಎನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ ಬೆರಗಾದೆ ಕಾಣಾ ಪ್ರಭುವೆ.

ಬಹಿರಂಗದಲ್ಲಿ ಅದೆ ಅಂದಡೇನು? ಪೂಜಿಸುವನ್ನಕ್ಕರ ಕಾಣಬಾರದು. ಸಾಕಾರವಲ್ಲದ ನಿರಾಕಾರ ಲಿಂಗವು

ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು. ಎನ್ನ ಮನದೊಳಗೆ ಘನವನನುಗೊಳಿಸಿ ತೋರುವರಿಲ್ಲದ ಕಾರಣ ಎನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ ಬೆರಗಾದೆ ಕಾಣಾ ಪ್ರಭುವೆ.

ಅಲ್ಲಮಪ್ರಭುಗಳು:

ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ, ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. ಇಲ್ಲದ ತನುವ ಉಂಟೆಂಬನ್ನಕ್ಕರ, ಅದೇ ಮಾಯೆಯಾಗಿ ಕಾಡುತ್ತಿಪ್ಪುದು. ನಿಃಕ್ರಿಯಾಲಿಂಗಕ್ಕೆ ಕ್ರಿಯಾಂತಲ್ಲದೆ ಆಗದೆಂಬವರ ಸಂದು ಸಂಶಯ ಮುಂದುಗೆಡಿಸುತ್ತಿಪ್ಪುದು ಕೇಳಾ, ಮನವ ಮನೆಯ ಮಾಡಿಕೊಂಡಿಪ್ಪ ಲಿಂಗದ ಅನುವನರಿಯಬಲ್ಲಡೆ, ಗುಹೇಶ್ವರಲಿಂಗ ದೂರವಿಲ್ಲ ಕೇಳಾ ಮುರುಳೆ.

ಮುಕ್ತಾಯಕ್ಕ:

ಗುರುವಚನದಿಂದಲ್ಲದೆ ಲಿಂಗವನರಿಯಬಾರದು. ಗುರುವಚನದಿಂದಲ್ಲದೆ ಜಂಗಮವನರಿಯಬಾರದು. ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು. ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು. ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ? ತನ್ನಲ್ಲಿ ತಾನು ಸನ್ನಿಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ, ಎನ್ನ ಅಜಗಣ್ಣನೆಂಬ ಗುರುವಿಲ್ಲದೆ ಆರೂಢಿಯ ಕೂಟ ಸಮನಿಸದು ಕೇಳಾ.

ಅಲ್ಲಮಪ್ರಭುಗಳು:

ಗುರುವಿಂಗೂ ಶಿಷ್ಯಂಗೂ-ಆವುದು ದೂರ? ಆವುದು ಸಾರೆ ಎಂಬುದನು ಆರುಬಲ್ಲರು? ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ. ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ. ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ, ಭಿನ್ನವಾಗಿ ಇದ್ದಿತ್ತೆಂದಡೆ, ಅದು ನಿಶ್ಚಯವಹುದೆ? ಆದಿ ಅನಾದಿಯಿಂದತ್ತತ್ತ ಮುನ್ನಲಾದ ಪರತತ್ವಮಂ ತಿಳಿದು ನೋಡಲು, ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು, ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕವಪ್ಪ ಗುರುವುಂಟೆ? ಇದು ಕಾರಣ, ಗುಹೇಶ್ವರಲಿಂಗವು ತಾನೆ ಎಂಬುದನು ತನ್ನಿಂದ ತಾನೆ ಅರಿಯಬೇಕು ನೋಡಾ.

ಮುಕ್ತಾಯಕ್ಕ:

ತನ್ನ ತಾನರಿದವಂಗೆ ಅರಿವೆ ಗುರು.

ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು.

ದೃಷ್ಟನಷ್ಟವೆ ಗುರು ತಾನಾದಲ್ಲಿ, ಮುಟ್ಟಿ ತೋರಿದವರಿಲ್ಲದಡೇನು?

ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ.

ಗುರು ತಾನಾದಡೂ ಗುರುವಿಡಿದಿರಬೇಕು ಎನ್ನ ಅಜಗಣ್ಣನಂತೆ.

ಅಲ್ಲಮಪ್ರಭುಗಳು:

ತೆರಹಿಲ್ಲ ಘನ ಕುರುಹಿಂಗೆ ಬಾರದ ಮುನ್ನ ತೋರಿದವರಾರು ಹೇಳಾ ಮಹಾ ಘನ ಲಿಂಗೈಕ್ಯವನು? ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು, ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು? ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ ಗುಹೇಶ್ವರಾ, ನಿಮ್ಮ ಶರಣನುಪಮಾತೀತನು.

ಮುಕ್ತಾಯಕ್ಕ:

ನಡೆದು ನಡೆದು ನಡೆಯ ಕಂಡವರು, ನುಡಿದು ನುಡಿದು ಹೇಳುತ್ತಿಹರೆ? ನುಡಿದು ನುಡಿದು ಹೇಳುವನ್ನಕ್ಕರ, ನಡೆದುದೆಲ್ಲಾ ಹುಸಿಯೆಂಬೆನು. 

ಮಾತಿನ ಮಥನದಿಂದಾದ ಅರಿವು, ಕರಣಮಥನದಿಂದಾದುದಲ್ಲದೆ, ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ? ಇದಿರ ಗೆಲಬೇಕೆಂದು ನುಡಿದುಕೊಂಡಡೇನು, ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ? ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು.

ಅಲ್ಲಮಪ್ರಭುಗಳು:

ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ! ತನ್ನ ತಾ ಮರೆದಡೆ ನುಡಿಯೆಲ್ಲಾ ಮಾಯೆ ನೋಡಾ! ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು ಉಪದೇಶವಲ್ಲದೆ ಭಿನ್ನವುಂಟೆ? ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ, ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ! ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ ಬಾಯ್ದೆಗೆದೆನಲ್ಲದೆ ಭಿನ್ನವುಂಟೆ ಹೇಳಾ ಮರುಳೆ?


ಮುಕ್ತಾಯಕ್ಕ:

ನುಡಿಯ ಹಂಗಿನ್ನೂ ನಿಮಗೆ ಹಿಂಗದು, ನಡೆಯನೆಂತು ಪರರಿಗೆ ಹೇಳುವಿರಿ? ಒಡಲ ಹಂಗಿನ ಸುಳುಹು ಬಿಡದು, ಎನ್ನೊಡನೆ ಮತ್ತೇತರ ಅನುಭವವಣ್ಣಾ? ತಾನಾದಲ್ಲದೆ ಇದಿರಿಂಗೆ ಹೇಳಬಹುದೆ? ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು ಕಾಣಾ ಎನ್ನ ಅಜಗಣ್ಣತಂದೆ.

ಅಲ್ಲಮಪ್ರಭುಗಳು:

ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ, ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದ ಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ, ನುಡಿದಡೆ ನಿಃಶಬ್ದ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.

ಮುಕ್ತಾಯಕ್ಕ:

ಕೈಯದು ಕುರುಹು, ಬಾಯದು ಬೊಬ್ಬೆ. ಉಲಿಯದಿರೊ ಭಾವಾ, ಉಲಿಯದಿರೊ ಭಾವಾ! ವಾರಿಕಲ್ಲ ಕೊಡನಲ್ಲಿ ಮುತ್ತು ಮಾಣಿಕವ ತುಂಬಿ, ಎತ್ತುವರಿಲ್ಲದೆ ಸಖಿಯನರಸುತಿಪ್ಪೆ, ಮನದ ತನುವಿನಲ್ಲಿ, ಆ ತನುವಿನ ಮನದಲ್ಲಿ ತನಗೆ ತಾನೆತ್ತಿಕೊಂಡಡೆ, ಮನ ಮೇರೆದಪ್ಪಿ ಕರಗಿ ಉಕ್ಕಿತ್ತು ನಮ್ಮ ಅಜಗಣ್ಣನ ಯೋಗ.

ಅಲ್ಲಮಪ್ರಭುಗಳು:

ಅರಿವುಗೆಟ್ಟು ಕುರುಹಳಿದು, ಭಾವಭ್ರಾಂತು ನಿಭ್ರಾಂತವಾದವರ ಕೈಯಲ್ಲಿ ಕುರುಹನರಸುವರೆ ಹೇಳಾ? ತಾನಳಿದು ತಾನುಳಿದು ತಾನುತಾನಾದ ನಿಜಶರಣಂಗೆ ಅಂತರಂಗದಲ್ಲಿ ಒಂದು ಅರಿವುಂಟೆ? ಬಹಿರಂಗದಲ್ಲಿ ಒಂದು ಕ್ರಿಯೆಯುಂಟೆ? ಒಳಹೊರಗೊಂದಾಗಿ ನಿಂದ ಗುಹೇಶ್ವರನ ಶರಣರ ನಿಲವು ಕಾಯಗೊಂಡವರ ಕಣ್ಣಿಂಗೆ ಸಂದೇಹವಾಗಿಪ್ಪುದು, ನಿಸ್ಸಂದೇಹಿಗಳಿಗೆ ನಿಜವಾಗಿಪ್ಪುದು ನೋಡಾ ಮುಕ್ತಾಯಿ.

ಮುಕ್ತಾಯಕ್ಕ:

ನುಡಿಯೆನೆಂಬಲ್ಲಿಯೆ ನುಡಿ ಅದೆ.

ನಡೆಯೆನೆಂಬಲ್ಲಿಯೆ ನಡೆ ಅದೆ.

ಭಾವಿಸೆನೆಂಬಲ್ಲಿಯೆ ಭಾವ ಅದೆ.

ಅರಿದು ಮರೆದೆನೆಂಬಲ್ಲಿಯೆ ಅರಿವು ಮರವೆ ಅದೆ.

ಅಂಗದಲ್ಲಿ ಲಿಂಗ ಲೀಯವಾಯಿತ್ತೆಂದಡೆ ಅಲ್ಲಿಯೆ ಅಂಗ ಅದೆ. ಅನಂಗಸಂಗಿಯಾದೆನೆಂಬಲ್ಲಿಯೆ ವಿಷಯ ಸೂತಕ ಅದೆ. ನಾನೆ ನಾನಾದೆನೆಂಬಲ್ಲಿಯೆ ನೀನೆಂಬುದು ಅದೆ.

ಅರಿದು ಮರೆದ ಪರಿ ಎಂತು ಹೇಳಾ? ಅರಿವು ನಷ್ಟವಾಗಿ ಮರಹು ಲಯವಾಗಿಪ್ಪಡೆ ಎನ್ನ ಅಜಗಣ್ಣತಂದೆಯಲ್ಲದೆ ಮಾತ್ತಾರನೂ ಕಾಣೆ.

ಅಲ್ಲಮಪ್ರಭುಗಳು:

ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ ಜ್ಞಾನನಷ್ಟ ಶಬ್ದ ನೋಡಾ. ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ ಭಿನ್ನವಿಲ್ಲ ನೋಡಾ ಗುಹೇಶ್ವರ ಸಾಕ್ಷಿಯಾಗಿ.

ಮುಕ್ತಾಯಕ್ಕ:

ಸಿಡಿಲುಹೊಯ್ದ ಬಾವಿಗೆ ಸೋಪಾನವೇಕೋ?

ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ?

ಸೊಡರುಳ್ಳ ಮನೆಗೆ ಮತ್ತೆ ತಮಂಧವೆಂಬುದೇನೋ?

ತನ್ನಲ್ಲಿ ತಾನು ತದ್ಗತವಾದ ಬಳಿಕ ಬೊಮ್ಮ ಪರಬೊಮ್ಮವಾದೆನೆಂಬುದಿಲ್ಲ ನೋಡಾ ಎನ್ನ ಅಜಗಣ್ಣತಂದೆಗೆ.


ಅಲ್ಲಮಪ್ರಭುಗಳು:

ನುಡಿಯಿಂದ ನಡೆಗೆಟ್ಟಿತ್ತು, ನಡೆಯಿಂದ ನುಡಿಗೆಟ್ಟತ್ತು.

ಭಾವದ ಗುಸುಟು ಅದು ತಾನೆ ನಾಚಿ ನಿಂದಿತ್ತು.

ಗುಹೇಶ್ವರನೆಂಬ ಅರಿವು ಸಿನೆ ಬಂಜೆಯಾಯಿತ್ತು.

ಮುಂದುವರಿದು ಅಲ್ಲಮಪ್ರಭುಗಳು:

ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ.

ಮಾಡಿದಡೇನಹುದೋ?

ಮಾಡದಿರ್ದಡೇನಹುದೋ?

ಗುಹೇಶ್ವರನೆಂಬ ಅರುಹಿನ ಕುರುಹು ಮುಂದಿಲ್ಲ, ಇಲ್ಲ.

ಮಾಡಿದಡೇನಹುದೋ.

ಮುಕ್ತಾಯಕ್ಕ:

ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು.

ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಸಿನದಂತೆ, ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ, ಇಪ್ಪ ನಿಲವ ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ?

ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು.

ಅಲ್ಲಮಪ್ರಭುಗಳು:

ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ ಅರಿವಿಂಗೆ ಅರಿವಾಗಿಪ್ಪ ಭೇದ ಕಾಣಬಂದಿತ್ತು ನೋಡಾ! ಅರಿವರಿತು ಮರಹು ನಷ್ಟವಾಗಿಪ್ಪುದು ನಿನ್ನಲ್ಲಿ ಸನ್ನಹಿತವಾಗಿತ್ತು. ಗುಹೇಶ್ವರನ ಶರಣ ಅಜಗಣ್ಣನ ನಿಲವು ಬಯಲ ಬೆರಸಿದ ಮರೀಚಿಕೆಯಂತಾಯಿತ್ತು, ಬೆರಸಿ ನೋಡಾ ಬೇರಿಲ್ಲದ!

ಮುಕ್ತಾಯಕ್ಕ:

ಘನಮಹಿಮ ಶರಣರ ಸಂಗದಿಂದ ಘನಕ್ಕೆ ಘನ ವೇದ್ಯವಾದ ಬಳಿಕ ಅರಿಯಲಿಲ್ಲ, ಮರೆಯಲಿಲ್ಲ; ಕೂಡಲಿಲ್ಲ, ಅಗಲಲಿಲ್ಲ. ಮನ ಮೇರೆದಪ್ಪಿ ನಿರವಯಲಾದ ಸುಖವ ಶೂನ್ಯ ನಿಶೂನ್ಯವೆಂದು ನುಡಿಯಲುಂಟೆ?

ಶಬ್ದಮುಗ್ಧವಾಗಿ ಎನ್ನ ಅಜಗಣ್ಣತಂದೆಯ ಬೆರಸಿದ ಬಳಿಕ ಉರಿಯುಂಡ ಕರ್ಪೂರದಂತಾದೆನಯ್ಯಾ.

ಅಲ್ಲಮಪ್ರಭುಗಳು:

ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ, ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-ಈ ಮೂರಕ್ಕೆಯೂ

ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ?

ಹೀಗೆ ಶರಣೆ ಮುಕ್ತಾಯಕ್ಕ ಹಾಗೂ ಅಲ್ಲಮಪ್ರಭುಗಳ ಸಂವಾದವು ಗಂಧವನ್ನು ತೇಯ್ದು ಪರಿಮಳವನ್ನು ಕೊಂಡಂತೆ ಆಗುತ್ತದೆ, ಇಬ್ಬರು ಜ್ಞಾನಿಗಳ ನಡುವಿನ ಸಂವಾದವೇ ಆಧ್ಯಾತ್ಮದ ಮೇರು ಕೃತಿಯಾಗಿದೆ. ಜ್ಞಾನಸೂರ್ಯ ಅಲ್ಲಮನೊಂದಿಗೆ ಸಂವಾದವ ಮಾಡಿ,

ತನ್ನಲ್ಲಿನ ಸಂದೇಹವೆಲ್ಲವನ್ನೂ ನಿವಾರಿಸಿಕೊಂಡು, ತನ್ನ ಅಣ್ಣನ ಹೆಸರನ್ನೇ ಅಂಕಿತನಾಮವಾಗಿ ಇಟ್ಟುಕೊಂಡು ವಚನ ರಚಿಸಿ, ಸ್ತ್ರೀ ಕುಲದ ವೈಚಾರಿಕ ಜ್ಯೋತಿಯಾಗಿ ಬೆಳಗುತ್ತಿರುವ ಶರಣೆ ಮುಕ್ತಾಯಕ್ಕ, ಮತ್ತೆ ಮರಳಿ ಮೊಸುಳಿಕಲ್ಲಿಗೆ ಬಂದು ,ಕಾಯಕ ಮುಂದುವರೆಸುತ್ತಾಳೆ, ಶರಣ ತತ್ವ ಪ್ರಸಾರ ಮಾಡುತ್ತಾ, ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೊಸುಳೆಕಲ್ಲು ಗ್ರಾಮದ ಬೆಟ್ಟದ ಮೇಲೆಯೇ ಬಯಲುಂಡ ಕರ್ಪೂರವಾಗಿ ಅಜಗಣ್ಣನೆಂಬ ಪರಮಜ್ಞಾನದ ಮಹಾಲಿಂಗನ್ನು ಕೂಡಿ ಬಯಲಾಗುತ್ತಾಳೆ.

ಇಂದಿಗೂ‌ ಮೊಸುಳೆಕಲ್ಲು (ಮೊಸರಕಲ್ಲು) ಗ್ರಾಮದ ಜನರು ಅತ್ಯಂತ ಭಕ್ತಿಗೌರವದಿಂದ ಶರಣೆ ಮಜ್ಜಿಗೆ ಮಾಳಮ್ಮ ಎಂದೇ ಗುರುತಿಸುತ್ತಾರೆ. 


ಜಗತ್ತೇ ಸಾಕ್ಷರತೆಯ ಅಂಬೆಗಾಲಿಡುವ ಕಾಲಘಟ್ಟದಲ್ಲಿ ಅತ್ಯಂತ ಉತ್ಕೃಷ್ಟ ಮಟ್ಟದ ಅರಿವಿನ್ನು ಪಡೆದು, ಮಹಾನ್ ಅನುಭಾವಿಯಾಗಿ, ದಿಟ್ಟ ಶರಣೆಯಾಗಿ, ವಚನಕಾರ್ತಿಯಾಗಿ, ಜನಮನ ಬೆಳಗಿದ ಪರಮಜ್ಞಾನದ ಸ್ತ್ರೀಕುಲ ರತ್ನವೇ ಶರಣೆ ಮುಕ್ತಾಯಕ್ಕ..👏🏻👏🏻👏🏻

                               ✍🏻ವಿಶೇಷ ಲೇಖನ-:

                           #ಲೋಕೇಶ್_ಎನ್_ಮಾನ್ವಿ.

                               📞 9972536176



Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’