ಬುದ್ದಿ ಮಾತಿಗೆ ಮುನಿಯಬೇಡ ಎನ್ನುತ್ತಾರೆ ವಿಶ್ವಗುರು ಅಪ್ಪ ಬಸವಣ್ಣನವರು.👌 ವಿಶ್ಲೇಷಣೆ: #ಲೋಕೇಶ್_ಎನ್_ಮಾನವಿ.
ಶ್ರೀಗುರುಬಸವಲಿಂಗಾಯ ನಮ:
ಬುದ್ದಿ ಮಾತಿಗೆ ಮುನಿಯಬೇಡ ಎನ್ನುತ್ತಾರೆ ವಿಶ್ವಗುರು ಅಪ್ಪ ಬಸವಣ್ಣನವರು.👌
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ. ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಪಥವ ಹೇಳಿದಡೆ ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.
•ವಿಶ್ವಗುರು ಬಸವಣ್ಣನವರು•
ಭಾವಾರ್ಥ -
•ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ•
ಹೌದು ಸ್ನೇಹಿತರೇ ಇಲ್ಲಿ ಒಬ್ಬ ತಂದೆ ಆದವನಿಗೆ ಜೀವನದ ಅನುಭವ, ಜವಾಬ್ದಾರಿ, ಕಷ್ಟ ನಷ್ಟಗಳು ಕಲಿಸಿದ ಬದುಕಿನ ಪಾಠವನ್ನು ತನ್ನ ಮಕ್ಕಳಿಗೆ ಹೇಳುತ್ತಾನೆ, ತಿಳಿಸುತ್ತಾನೆ, ಎಚ್ಚರಿಸುತ್ತಾನೆ, ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಬೈದು ಕೋಪದಿಂದ ಗದುರಿಸಿ ಬುದ್ಧಿ ಹೇಳಬಹುದು, ಆದರೆ ಆತನ ಕಾಳಜಿಯ ಹಿಂದಿರುವ ಕೋಪ ಸಾತ್ವಿಕವಾದದ್ದೇ ವಿನಃ ತಾಮಸವಾದದ್ದಲ್ಲ.
ಅಂದರೆ, ಆತನ ಮುನಿಸು ಕೋಪ ಸಿಟ್ಟೆಲ್ಲವು ಮಕ್ಕಳ ಮೇಲಲ್ಲ, ಬದಲಾಗಿ ಮಕ್ಕಳು ಮಾಡಿದ ತಪ್ಪಿನ ಮೇಲೆ ಆತನ ಕೋಪ, ಮತ್ತೊಮ್ಮೆ ತನ್ನ ಮಕ್ಕಳು ತಪ್ಪು ಮಾಡದಿರಲಿ ಎಂಬ ಕಾಳಜಿಯೇ ಆ ಸಾತ್ವಿಕ ಕೋಪದ ಹಿಂದಿರುವ ಸದುದ್ದೇಶವಾಗಿದೆ.
ಅದರಂತೆಯೇ
•ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ• •ಲಿಂಗಭಕ್ತನು ಲಿಂಗಪಥವ ಹೇಳಿದಡೆ ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ•
ತಂದೆ ಮಕ್ಕಳಿಗೆ ಬುದ್ಧಿ ಹೇಳುವಲ್ಲಿ ಇರುವ ಸಾತ್ವಿಕ ಮನೋಭಾವ, ಅರಿವು ಜ್ಞಾನ, ಇಲ್ಲಿಯೂ ಇದೆ, ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಇಲ್ಲಿ ಲಿಂಗವಂತ ಎಂದರೆ, ಹಣ ಇರುವವ ಹಣವಂತ, ಗುಣ ಇರುವವ ಗುಣವಂತ, ವಿದ್ಯೆ ಇರುವವ ವಿದ್ಯಾವಂತ, ಜ್ಞಾನ ಇರುವವ ಜ್ಞಾನವಂತ, ಆರೋಗ್ಯಯುಳ್ಳವ ಆರೋಗ್ಯವಂತ, ಮತಿ ಇರುವವ ಮತಿವಂತ, ನೀತಿ ಇರುವವ ನೀತಿವಂತ, ಹಾಗೆಯೇ ಎದೆಯ ಮೇಲೆ ಲಿಂಗವ ಧರಿಸಿ ಅದರ ಬಗ್ಗೆ ಅರಿವುವುಳ್ಳವನೇ ಲಿಂಗವಂತ.
ಇಲ್ಲಿ ನೀತಿವಂತನು ನೀತಿ ತಪ್ಪಿದಾಗ ಅನೀತಿವಂತನಾಗುತ್ತಾನೆ, ಆರೋಗ್ಯವಂತನು ಇಲ್ಲಿ ಆರೋಗ್ಯ ತಪ್ಪಿದಾಗ ಅನಾರೋಗ್ಯನಾಗುತ್ತಾನೆ,
ಅದರಂತೆಯೇ ಲಿಂಗವಂತನು ಅವಗುಣಗಳಿಗೆ, ದುಶ್ಚಟಗಳಿಗೆ, ಸಿಲುಕಿ ಧರ್ಮದ (ದಯೆ,ಕರುಣೆ,ಪ್ರೀತಿಯ,ಕಾಯಕ ದಾಸೋಹದ ) ಅರಿವಿನ ಮಾರ್ಗ ಬಿಟ್ಟಾಗ ಅವನು ಲಿಂಗವಿದ್ದರೂ ಅದರ ಅರಿವು ಇಲ್ಲವಾದ್ದರಿಂದ ಲಿಂಗವಂತ ಎಂದೆನಿಸಿ ಕೊಳ್ಳುವುದಿಲ್ಲ , ಆತನಿಗೆ ಮತ್ತೊಬ್ಬ ಅರಿವುಯುಳ್ಳ ಲಿಂಗವಂತನು ತನ್ನ ಪ್ರೇಮ ಪೂರಿತ ಸಾತ್ವಿಕ ಕೋಪದಿಂದ ಎಚ್ಚರಿಸಿ ತಿಳಿ ಹೇಳಿದರೆ, ಅದು ಅವನಲ್ಲಿರುವ ಅವಗುಣಕ್ಕೇ ಹೊರತು ವೈಯುಕ್ತಿಕವಾಗಿ ಅವನಿಗಲ್ಲ , ಅವನ ಲಿಂಗಕ್ಕೆಯೂ ಅಲ್ಲ. ಇಲ್ಲಿ ಲಿಂಗಗುಣವುಳ್ಳ ( ಸಜ್ಜನ, ಸಾತ್ವಿಕ, ಸನ್ನಡತೆ, ಸಮತೆಯುಳ್ಳ) ಲಿಂಗ ಭಕ್ತನು, ಮತ್ತೊಬ್ಬ ಲಿಂಗವಂತನಿಗೆ ಪ್ರಕೃತಿಯ ಸಹಜ ಸತ್ಯವಾದ ಲಿಂಗದ (ಅರಿವಿನ) ಪಥವನ್ನು ಸನ್ಮಾರ್ಗವನ್ನು ತಿಳಿಸಿ ಹೇಳಿದರೆ ಅದನ್ನು ಒಪ್ಪದೆ ಬರಿದೆ ಟೀಕಿಸುವವರ ಮೆಚ್ಚನು ನಮ್ಮ ಕೂಡಲಸಂಗಮದೇವ ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು.👏🏻👏🏻👏🏻
ಶರಣು ಶರಣಾರ್ಥಿಗಳೊಂದಿಗೆ 🙏
ವಿಶ್ಲೇಷಣೆ -: #ಲೋಕೇಶ್_ಎನ್_ಮಾನ್ವಿ.
Comments
Post a Comment