ಅರಿವಿನ ಮಾರಿತಂದೆಗಳ ವಚನದಲ್ಲಿ ಗುರು-ಶಿಷ್ಯರ ಸಂಬಂಧ, ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.
ಶ್ರೀಗುರುಬಸವಲಿಂಗಾಯ ನಮಃ
ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ:
ಮಣಿ ದಾರವ ನುಂಗಿ ಸರವಾಗಿ ನಿಂದು ಕಾಣಿಸಿಕೊಂಡಂತಿರಬೇಕು,
ರತ್ನಪುಂಜ ಕುಂದಣದ ಮೇಲೆ ನಿಂದು ಚಂದವ ಕಾಣಿಸಿಕೊಂಡಂತಿರಬೇಕು,
ಶಂಖದ ಮೇಲೆ ಸಂಭ್ರಮದ ಜಾತಿ ಉತ್ತರ ನಿಂದು ತೋರಿದಂತಿರಬೇಕು,
ಇಂತೀ ಭೇದ.
ಘಟ ಗುರು, ಆತ್ಮ ಶಿಷ್ಯನಾಗಿ ತೋರುವ ಬೆಳಗು ತಾನೆ,ಸದಾಶಿವಮೂರ್ತಿಲಿಂಗವು.
✍🏾-#ಶರಣ_ಅರಿವಿನ_ಮಾರಿತಂದೆಯವರು,
ಭಾವಾರ್ಥ-
ಮೇಲಿನ ವಚನದಲ್ಲಿ ಶರಣರು ಶ್ರೀಗುರು-ಶಿಷ್ಯರ ಶ್ರೇಷ್ಠ ಸಂಬಂಧದ ಬಗ್ಗೆ ತುಂಬಾ ಸೊಗಸಾದ ಹೊಂದಿಕೆಯೊಂದಿಗೆ ತಿಳಿಸಿದ್ದಾರೆ,
#ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ: ಮಣಿ ದಾರವ ನುಂಗಿ ಸರವಾಗಿ ನಿಂದು ಕಾಣಿಸಿಕೊಂಡಂತಿರಬೇಕು,
ಮುತ್ತು ಮತ್ತು ಹವಳದ ಮಣಿಗಳು ಹೇಗೆ ದಾರವನ್ನೇ ಹಿಡಿದು, ಆ ದಾರವನ್ನೇ ನುಂಗಿ, ದಾರದಲ್ಲಿಯೇ ಬೆರಸಿ ಬೇರಿಲ್ಲದಂತೆ ತಾವು ಮುತ್ತಿನ ಹಾರವಾಗುತ್ತವೊ ಹಾಗೇ ಇಲ್ಲಿ ಮಣಿ ಎಂದರೆ (ಸಾಧನೆಯ ಆಕಾಂಕ್ಷಿ - ಶಿಷ್ಯ,) ದಾರ ಎಂದರೆ (ಸಾಧನೆಗೆ ಬೇಕಾದ ಸನ್ಮಾರ್ಗ ಅರಿವು-ಗುರು,) ಸಾಧನೆಯ ಆಕಾಂಕ್ಷಿಯಾದ ಶಿಷ್ಯನು ಸಾಧನೆಯ ಮಾರ್ಗವೇ ಆದ (ಅರಿವು) ಗುರು ತತ್ವವನ್ನೇ ಬೆನ್ನತ್ತಿ, ಅರಿವನ್ನು ಅನುಕರಿಸಿ, ಅರಿವನ್ನು ಆಸ್ವಾಧಿಸಿ, ಅರಿವನ್ನೇ ಆನಂದಿಸಿ, ಆ ಅರಿವನ್ನೇ ಆವರಿಸಿಕೊಂಡು, ಗುರುವೆಂಬ ಜ್ಯೋತಿ ಮುಟ್ಟಿ ತಾನೂ ಪ್ರತಿಜ್ಯೋತಿಯಾಗಿ ಪ್ರಜ್ವಲಿಸಿ, ಶ್ರೀಗುರು ಶಿಷ್ಯರು ಬೆರಸಿ ಬೇರಿಲ್ಲದಂಗ ಒಂದಾಗಬೇಕು,
#ರತ್ನಪುಂಜ ಕುಂದಣದ ಮೇಲೆ ನಿಂದು ಚಂದವ ಕಾಣಿಸಿಕೊಂಡಂತಿರಬೇಕು,
ರತ್ನಪುಂಜವೆಂದರೆ; ಹಲವಾರು ರತ್ನಗಳಿರುವ ಒಂದು ಅಮೂಲ್ಯವಾದ ‘ವಜ್ರದ ಗಟ್ಟಿ’
ಕುಂದಣವೆಂದರೆ; ರತ್ನವನ್ನು ಚಿನ್ನದಲ್ಲಿ ಕೂಡಿಸುವ ಸಾಂಪ್ರದಾಯಿಕ ವಿಧಾನ ಇದು ರತ್ನಗಳಿಗೆ ಒಂದು ಆಕಾರ ಕೊಡುತ್ತವೆ, ರತ್ನಗಳು ಮತ್ತು ಚಿನ್ನದ ನಡುವೆ ಚಿನ್ನದ ತೆಳುಹಾಳೆಯನ್ನು ಕೂಡಿಸಿ ಆಭರಣಗಳಿಗೆ ಜೋಡಿಸಿ ರತ್ನವನ್ನು ಒಂದು ಆಕಾರಕ್ಕೆ ತಂದು ಅದರ ಸೌದರ್ಯವನ್ನು ಮತ್ತಷ್ಟು ಹೆಚ್ಚಿಸಿ ಚೆಂದ ಕಾಣುವಂತೆ ಮಾಡುತ್ತದೆ,
ಅದರಂತೆ; ಶ್ರೀಗುರು ಕುಂದಣದಂತಾಗಿ ತನ್ನ ಶಿಷ್ಯನ ಬದುಕಿಗೊಂದು ಸುಂದರ ರೂಪ ಕೊಟ್ಟು ಅವನೊಳಗಡಗಿದ ಪ್ರತಿಭೆಯನ್ನು ಹೊರ ತಂದು ಸಮಾಜದಲ್ಲಿ ಅವನನ್ನು ಸುಂದರ ವ್ಯಕ್ತಿತ್ವಯುಳ್ಳ ಸಾಧಕನನ್ನಾಗಿ ಮಾಡಿ, ಶಿಷ್ಯನೂ ಗುರುವಾಗಿ ಬೆರೆಯುವ ಪರಿಯದು,
#ಶಂಖದ ಮೇಲೆ ಸಂಭ್ರಮದ ಜಾತಿ ಉತ್ತರ ನಿಂದು ತೋರಿದಂತಿರಬೇಕು,
ಶಂಖದಲ್ಲಿ ಶಬ್ಧವಿದ್ದೂ ನಿಶಬ್ಧವಾಗಿರುವಂತೆ, ಶಿಷ್ಯನಲ್ಲೂ ಗುರುವಿದ್ದು ಅಗೋಚರನಾಗಿದ್ದನೆ, ಅವನಲ್ಲಿನ ಗುರು ತತ್ವ (ಅರಿವನ್ನು ) ಜಾಗ್ರತಗೊಳಿಸಿದಾಗ, ಶಂಖದಲ್ಲಿನ ಶಬ್ಧವು ಗಾಳಿಯ ಸಹಾಯದಿಂದ ಮಾರ್ಧ್ವನಿಸಿದಂತೆ, ಸಾಧಕ ಶಿಷ್ಯನಲ್ಲಿನ ಅರಿವೆಂಬ (ಗುರುತತ್ತ್ವವು) ಬಸವಾದಿ ಶರಣರ ಸದ್ವಿಚಾರಗಳಿಂದ ಜಾಗತ್ರವಾಗಿ ಜಗತ್ತಿನ ಮುಂದೆ ಜ್ಞಾನಿಯೆನಿಸಿ ಹೊರಹೊಮ್ಮುತ್ತದೆ.
ಇಂತೀ ಭೇದ. ಘಟ ಗುರು, ಆತ್ಮ ಶಿಷ್ಯನಾಗಿ ತೋರುವ ಬೆಳಗು ತಾನೆ,ಸದಾಶಿವಮೂರ್ತಿಲಿಂಗವು.
ಇನ್ನು ಎರಡೂ ಒಂದೇ ಆಗಿ ಭೇದವೇಕೆ? ಎಂದರೆ,
ಭೇದಿಸಲಾಗದ ಘಟ ಗುರುವಾದರೆ, ಅವನೊಳಗಡಗಿದ ಚೈತನ್ಯವೇ ಶಿಷ್ಯನಾಗಿ ತೋರಬೇಕು, ಗುರುವೆಂಬ ಜ್ಯೋತಿ ಮುಟ್ಟಿ, ಪ್ರತಿ ಜ್ಯೋತಿಯಾದ ಶಿಷ್ಯ, ಇವರಿಬ್ಬರಲ್ಲಿ ಬೆಳಗುವ ಜ್ಯೋತಿಯೊಂದೆ, ಅದು ಅಗಮ್ಯವಾದ ಅಪ್ರತಿಮ ಅಧ್ವತೀಯ ಬೆಳಕು ಅದುವೇ ಸದಾಶಿವಮೂರ್ತಿಲಿಂಗವು ತಾನೆ, ಎಂಬುದಾಗಿದೆ ಮೇಲಿನ ವಚನದ ಭಾವಾರ್ಥ,.👏🏻👏🏻
ಶರಣು ಶರಣಾರ್ಥಿಗಳೊಂದಿಗೆ,
✍🏾-; ಲೋಕೇಶ್ ಎನ್ ಮಾನ್ವಿ.
-/ 9972536176
Comments
Post a Comment