‘ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು’ ವಿಶೇಷ ಲೇಖನ-; ಲೋಕೇಶ್ ಎನ್ ಮಾನ್ವಿ.
ಶ್ರೀಗುರು ಬಸವಲಿಂಗಾಯ ನಮಃ
‘ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು’
ಇಡೀ ಜಗತ್ತಿಗೆ ‘ಕಾಯಕವೇ ಕೈಲಾಸ’ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು, ಇವರು ಶರಣ ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿಯಾಗಿದ್ದರು, ಶರಣ ಸತಿಪತಿಗಳಿಬ್ಬರೂ ಮೂಲತಃ ರಾಯಚೂರು ಜಿಲ್ಲೆ, ಲಿಂಗಸೂಗೂರು ತಾಲೂಕಿನ ಅಮರೇಶ್ವರ ಗ್ರಾಮದವರಾಗಿದ್ದರೂ ಕಲ್ಯಾಣದಲ್ಲಿ ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳಿಗೆ ಮಾರು ಹೋಗಿ ಕಲ್ಯಾಣಕ್ಕೆ ಬರುತ್ತಾರೆ, ಕಲ್ಯಾಣಕ್ಕೆ ಬಂದ ನಂತರ ಅನುಭವ ಮಂಟಪದಲ್ಲಿ ಇಬ್ಬರಿಗೂ ಆತ್ಮೀಯ ಸ್ವಾಗತ ಕೋರಲಾಗುತ್ತದೆ,
ಆದರೆ ಲಕ್ಕಮ್ಮನವರು ಹೆಚ್ಚಾಗಿ ಕಾಯಕ ದಾಸೋಹದಲ್ಲೇ ತೊಡಗುತ್ತಾರೆ, ಕಲ್ಯಾಣದಲ್ಲಿ ಇವರ ಕಾಯಕ ಹೊಲಗಳಲ್ಲಿ ಕೆಲಸ ಮಾಡುವುದು, ಭತ್ತದ ಕಣವಾದ ನಂತರ ಮಾಲಿಕರು ಮನೆಗೆ ಭತ್ತ ಒಯ್ಯುವಾಗ ಅಳಿದುಳಿದು ಬಿದ್ದ ಭತ್ತವನ್ನೇ ಕೂಲಿಯಾಗಿ ಆಯ್ದು ತಂದು ಅದರಲ್ಲೇ ದಾಸೋಹ ಮಾಡಿ ಮಿಕ್ಕಿದ್ದನ್ನು ಸೇವಿಸಿ ಸಂತೃಪ್ತರಾಗುತ್ತಿದ್ದರು, ಹೀಗಿರುವಾಗ ಪತಿ ಮಾರಯ್ಯ ಕೂಲಿಗೆಂದು ಹೊಲದಲ್ಲಿ ದುಡಿದು ಬರುವಾಗ ದಿನಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತರುತ್ತಾನೆ, ಇದನ್ನು ಗಮನಿಸಿದ ಪತ್ನಿ ಲಕ್ಕಮ್ಮ ಗಂಡನನ್ನು ಬಾಗಿಲಲ್ಲೇ ನಿಲ್ಲಿಸಿ
‘ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗು0ಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ;
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿ ಆಸೆ ಎಂಬುದು ಅರಸರಿಗೆ ಇರುವಂತದ್ದು, ರೋಷವೆಂಬುದು ಯಮದೂತರಿಗೆ ಇರುತ್ತದೆ, ನಮಗೆ #ಸಹನೆ_ಸಮತೆ ಕಾಯಕ ನಿಷ್ಠೆ ನಿಷ್ಕಲ್ಮಶ ಭಕ್ತಿಯೊಂದೇ ಶರಣರಿಗೆ ಮುಖ್ಯ ಎಂದು ಗಂಡನಿಗೆ ಬುದ್ದಿವಾದ ಹೇಳುತ್ತಾಳೆ, ತದನಂತರ ಪತಿ ಮಾರಯ್ಯನು ಹೆಚ್ಚಿನದಾಗಿ ತಂದ ಅಕ್ಕಿಯನ್ನು ಪುನಃ ಮರಳಿಸಿ ಬರುತ್ತಾನೆ, ಶರಣೆ ಲಕ್ಕಮ್ಮ 'ಹಿಡಿಯಕ್ಕಿ' ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ "ಸೈ"ಎನಿಸಿಕೊಳ್ಳುತ್ತಾರೆ. ಶರಣರೆಲ್ಲ ಆಕೆಯ ಭಕ್ತಿಗೆ ಮೂಕ ವಿಸ್ಮಿತರಾಗಿ 'ಭಕ್ತಿಯ ಮುಂದೆ ಎಲ್ಲವೂ ಮಿಥ್ಯ'ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ, ಕಾಯಕ ನಿಷ್ಠೆಯಲ್ಲಿ ಬಸವಣ್ಣನವರನ್ನೇ ಮೀರಿಸುವಂತೆ ಬೆಳೆದ ಆಯ್ದಕ್ಕಿ ಲಕ್ಕಮ್ಮನವರು. ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ,
ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದರೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು,
ಎಂದು ಹೇಳುವ ಮೂಲಕ ಕಾಯಕದ ಶ್ರೇಷ್ಠತೆಯನ್ನು ಇಡೀ ಜಗತ್ತಿಗೆ ಸಾರಿ ಸಾರಿ ತಿಳಿಸುತ್ತಾರೆ, ಏನೇ ನಿಂತರೂ ಕಾಯಕ ನಿಲ್ಲಬಾರದು ಅನ್ನುತ್ತಾರೆ ಶರಣರು, ಪತಿಯು ಆಸೆಬುರುಕನಾದಾಗ ಸತಿಯು ಆತನಿಗೆ ಬುದ್ದಿವಾದ ಹೇಳಿ ಸತ್ಯ ಮಾರ್ಗದೆಡೆಗೆ ನಡೆಸಬೇಕು, ಸತಿಯೇ ಆಸೆಬುರುಕಿಯಾದರೆ ಪತಿ ಲಂಚಬಾಕನಾಗುತ್ತಾನೆ, ಇದನ್ನು ಮನಗಂಡ ಲಕ್ಕಮ್ಮ ತಾನೇ ತನ್ನ ಪತಿಗೆ ಬುದ್ದಿವಾದ ಹೇಳಿ ದುಡಿಮೆಗಿಂತ ಹೆಚ್ಚಿನದನ್ನು ಆಸೆ ಮಾಡಬೇಡಿರೆಂದು ತಿಳಿಸಿದ ಪರಿ ಮತ್ತು ಪರಿಶ್ರಮದಿಂದ ತಂದು ದಾಸೋಹ ತತ್ವದಿಂದ ಸಮಾಜಕ್ಕೆ ಅರ್ಪಿಸುವ ಅವಳ ನಿಸ್ವಾರ್ಥತೆಯ ಪ್ರಬುದ್ಧ ನಿಲುವು, ಶರಣರಿಗಿದ್ದ ಸಮಾಜಿಕ ಕಳಕಳಿಯನ್ನು ಜಗತ್ತಿಗೆ ಎತ್ತಿತೋರಿಸುತ್ತದೆ.
ನಮ್ಮೆಲ್ಲರಿಗೆ ಆದರ್ಶವಾಗುವಂತೆ ಬದುಕಿದ ಶರಣರ ಮಾರ್ಗ ನಮ್ಮೆಲ್ಲ ಯುವಜನಾಂಗಕ್ಕೆ ಸರ್ವಕಾಲಕ್ಕೂ ಪ್ರಸುತವಾಗಿದೆ, ಈ ಸಮಾಜಕ್ಕೆ ನಮಗೂ ನಿಮಗೂ ಎಲ್ಲರ ಬದುಕಿಗೂ ಶರಣರ ಆದರ್ಶಮಯ ತತ್ವಗಳು ಅವರ ಜೀವನ ಶೈಲಿ ಅನಿವಾರ್ಯವಾಗಿವೆ.
ಸದಾ ಪ್ರಸ್ತುತವಾಗಿದ್ದಾರೆ ಶರಣರು,
ಸದಾ ಅಜರಾಮರಾಗಿದ್ದರೆ ನಮ್ಮೆಲ್ಲರ ಮನದಲ್ಲಿ,..
ಎಲ್ಲರಿಗೂ ಶರಣು ಶರಣಾರ್ಥಿಗಳೊಂದಿಗೆ..
ವಿಶೇಷ ಲೇಖನ-; ಲೋಕೇಶ್ ಎನ್ ಮಾನ್ವಿ.
-/ 9972536176
ಕಾಯಕವೇ ಕೈಲಾಸ ಎಂದು ತಿಳಿಸಿದರು ಲಕ್ಕಮ್ಮನವರು ಚಿಂತನೆ ಚೆನ್ನಾಗಿದೆ
ReplyDelete