‘ಕಾಯಕವೇ ಪ್ರಾಣವಾದ ಮೇದಾರ ಕೇತಯ್ಯ ಶರಣರು’ ವಿಶೇಷ ಲೇಖನ-; ಲೋಕೇಶ್_ಎನ್_ಮಾನ್ವಿ.
ಶ್ರೀಗುರುಬಸವಲಿಂಗಾಯ ನಮಃ
‘ಕಾಯಕವೇ ಪ್ರಾಣವಾದ ಮೇದಾರ ಕೇತಯ್ಯ ಶರಣರು’
ಬಸವಯುಗದ ಧೃವತಾರೆ ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿ ಬಸವಣ್ಣನವರ ಜೀವಪರ ಸಾಮಾಜಿಕ ಸೈಕ್ಷಣಿಕ ಹೋರಾಟಕ್ಕೆ ಮನಸೋತು ಬಂದ ಮೇರು ವ್ಯಕ್ತಿತ್ವವೇ ಶಿವಶರಣ ಮೇದಾರ ಕೇತಯ್ಯನವರು. ಇವರು ಬಸವಣ್ಣನಿಂದ ಪ್ರಭಾವಿತರಾಗಿ ಅತ್ಯಂತ ಉತ್ಸಾಹಿಗಳಾಗಿ ಶರಣರ ಚಳುವಳಿಯಲ್ಲಿ ಪಾಲ್ಗೊಂಡವರು ಕೇತಯ್ಯ ಶರಣರು. ಇವರು ಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿದವರು. ಬಸವಣ್ಣನವರ ಪ್ರಭಾವದಿಂದ ಗುರು-ಲಿಂಗ-ಜಂಗಮದಲ್ಲೇ ತನ್ನ ನಿಜಸುಖವನ್ನು ಕಂಡವರು. ಭಕ್ತರಾಗಿ ಶರಣರಾಗಿ ಕಾಯಕದಲ್ಲೇ ಕೈಲಾಸವನ್ನು ಕಂಡವನು. ಶರಣರ ತತ್ತ್ವಗಳಾದ ದಯೆ ಕರುಣೆ ಕಾಯಕ ದಾಸೋಹ ತತ್ತ್ವಗಳನ್ನು ಅನುಷ್ಠಾನದಲ್ಲಿ ತಂದವರು ಶರಣ ಮೇದಾರ ಕೇತಯ್ಯನವರು.
ಸತ್ಯಶುದ್ಧ ಕಾಯಕ ಜೀವಿಯಾಗಿ ಜಂಗಮ ಪ್ರೇಮಿಗಳಾಗಿ ವಚನಕಾರರಾಗಿ ಅನುಭವ ಮಂಟಪದ ೭೭೦ ಅಮರಗಣಂಗಳಲ್ಲಿ ಇವರೂ ಒಬ್ಬರಾಗಿದ್ದರು. ಇವರ ಜೀವನವೇ ಒಂದು ಸತ್ಯಶುದ್ಧ ಕಾಯಕ ಸಂದೇಶವಾಗಿದೆ. ಇವರ ಜೀವನದ ಕುರಿತ ಜನ ಮಾನಸದಲ್ಲಿರುವ ಚರಿತ್ರೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುವೆ.
ಮೇದರ ಕೇತಯ್ಯ ಶರಣರು ಬೇಲೂರಿನಲ್ಲಿ ಬಿದಿರು ಕಾಯಕ ಮಾಡುತ್ತಾ, ಬಂದ ಹಣದಿಂದ ದಾಸೋಹಮಾಡಿಕೊಂಡು ಹೋಗುತ್ತಿದ್ದರು. ತದ ನಂತರ ಇವರು ಕಲ್ಯಾಣದ ಬಸವಣ್ಣನ ತತ್ವಗಳನ್ನು ಕೇಳಿ ತಾನೂ ಅಲ್ಲಿಗೆ ಹೋಗಬೇಕೆಂದು ಮನಸ್ಸು ಮಾಡಿ ಹೆಂಡತಿ ಜೊತೆ ಹೋಗಿ ಮೇದರ ಬಿದಿರು ಬುಟ್ಟಿ ಮಾಡುವ ಕಸುಬನ್ನು ಮಾಡಿಕೊಂಡು ಹೋಗುತ್ತಿದ್ದರು. ಕಾಯಕದಿಂದ ಬಂದದ್ದನ್ನು ದಾಸೋಹದಲ್ಲಿ ವಿನಿಯೋದಿಸಿ ಮಿಕ್ಕಿದನ್ನು ಪ್ರಸಾದವಾಗಿ ಸ್ವೀಕರಿಸುತಿದ್ದರು ಹೀಗಿರುವಾಗ ಒಮ್ಮೆ ಶಿವನು ಈತನ ಮಹಿಮೆಯನ್ನು ಜಗತ್ತಿನಾದ್ಯಂತ ಪಸರಿಸಬೇಕೆಂದು ಒಂದು ನಿರ್ಧರಿಸಿ, ಅಂದು ಶರಣ ಕೇತಯ್ಯನವರು ಬಿದಿರನ್ನು ಕತ್ತರಿಸಿದಾಗ ಅದರಿಂದ ಹೊನ್ನು ಸುರಿಸಿದನು, ಅದನ್ನು ನೋಡಿ ಅಚ್ಚರಿಯಾಯಿತು ಕೇತಯ್ಯರಿಗೆ. ಅದನ್ನು ಬಿಟ್ಟು ಮತ್ತೊಂದನ್ನು ಕತ್ತರಿಸಿದರು, ಅದರಲ್ಲೂ ಕೂಡ ಹೊನ್ನು ಸುರಿಯಿತು, ಅದನ್ನು ಕಂಡು ಇದೇನು ಹುಳುಗಳು ಶಿವ ಶಿವಾ! ಎಂದು ಅದನ್ನು ಅಲ್ಲೇ ಎಸೆದು ಬಂದರು.
ಮತ್ತೆ ಬೇರೊಂದು ದೊಡ್ಡ ಬಿದಿರ ಗಿಡವನ್ನು ಏರಿ ಕಡಿದು ತಂದರು, ಅದರಿಂದಲೂ ಮುತ್ತುಗಳು ಸುರಿ ಸುರಿದು ಬೀಳತೊಡಗಿದವು. ನಂತರ ಮತ್ತೊಂದು ಬಿಡದ ಬಿದರನ್ನು ರಭಸದಿಂದ ಕೀಳುವಾಗ ಬಿದಿರಿನ ಸಿಬಿರು ದೇಹಕ್ಕೆ ನಾಟಿ ತೀವ್ರರಕ್ತ ಸ್ರಾವದಿಂದ ಹೊರಳಾಡುತ್ತಿದ್ದರೂ, ಅವರಿಗೆ ತಮ್ಮ ಚಿಂತೆ ಇರಲಿಲ್ಲ ದೇಹಕ್ಕಾದ ನೋವನ್ನು ಅಲ್ಲೇ ಮರೆತು ದಾಸೋಹದ ಚಿಂತೆ ಮಾಡತೊಡಗಿದರು ಕೇತಯ್ಯ ಶರಣರು. ಆಗ ಸಮಯ ಓಡುತ್ತಿತ್ತು ವೇಳೆಯಾಗುತ್ತಿತ್ತು ಮುಳುಗುವ ಸೂರ್ಯನನ್ನುದ್ದೇಶಿಸಿ…
"ಎಲೈ ಸೂರ್ಯನೇ, ನಾನು ಹೇಳುವವರೆಗೆ ಮುಳುಗ ಬೇಡ. ಇದು ನನ್ನ ಸತ್ಯ ಶುದ್ಧ ಕಾಯಕದ ಮೇಲಾಣೆ" ಎಂದು ತಾಕಿತು ಮಾಡಿ ತಾನು ತಂದಿದ್ದ ಬಿದಿರನ್ನು ತೆಗೆದುಕೊಂಡು ಹೆಂಡತಿಗೆ ಹೇಳಿದ "ಇದರಲ್ಲಿ ಮೊರ, ಬುಟ್ಟಿ, ಮಾಡಿ ಮಾರಿ ಬಾ" ಎಂದು. ಆಕೆ ಹಾಗೆಯೇ ಮಾಡಿ ಹಣ ತಂದಳು. ಆಗ ಅದರಿಂದ ಜಂಗಮ ದಾಸೋಹವನ್ನು ಮಾಡಿ ಮುಗಿಸು ಎಂದರು ಕೇತಯ್ಯರು. ಆಕೆ ಆ ಕಾಯಕ ಮಾಡಿದಳು. ಕೊನೆಗೆ ಹೆಂಡತಿಗೆ ಹೇಳಿದ- "ನನ್ನ ಎದೆಯನ್ನು ಚುಚ್ಚಿರುವ ಬಿದಿರು ಸಿಬಿರನ್ನು ತೆಗೆ" ಎಂದ. ಆಕೆ ಅದನ್ನು ಕೀಳಿದಾಕ್ಷಣವೇ, ಶರಣ ಕೇತಯ್ಯನವರು ಇಹವನ್ನು ತ್ಯಜಿಸಿದರು. ಆಗ ಸೂರ್ಯನೂ ಮುಳುಗಿದ, ಅಹೋರಾತ್ರಿ ಹೆಂಡತಿಯು ರೋದಿಸಿ ರೋದಿಸಿ ಸುಸ್ತಾಗಿದ್ದಳು, ಆಗ ಬೆಳಗಾಯಿತು. ಕಲ್ಯಾಣವೆಲ್ಲ ಸುತ್ತಾಡಿ ಹೂ ಮಾರುತ್ತಿದ್ದ ಹೂಗಾರ ಮಾದಣ್ಣ ಬಂದು ನೋಡಿ ಈ ವಿಷಯವನ್ನು ಬಸವಣ್ಣನಿಗೆ ತಿಳಿಸಿದನು. ಬಸವಣ್ಣ ಬಂದು ನೋಡಿ ಜಂಗಮ ಪ್ರೇಮಿಯಾದ ಬಸವಣ್ಣನು ತನ್ನ ಪ್ರಾಣವನ್ನೇ ಆ ಜಂಗಮನಲ್ಲಿ ಲೀನ ಮಾಡಿದನು.
ಅಷ್ಟರಲ್ಲಿ ಅಲ್ಲಿಗೆ ಮಡಿವಾಳ ಮಾಚಯ್ಯ ಬರುತ್ತಾನೆ. ಆಗ ಮಡಿವಾಳ ಮಾಚಯ್ಯ ಇಬ್ಬರನ್ನು ಹೊಗಳುತ್ತಾ ಘಂಟೆಯನ್ನು ಬಾರಿಸಲು ಕೇತಯ್ಯ-ಬಸವಣ್ಣ ಇಬ್ಬರೂ ಶಿವಯೋಗ ನಿದ್ರೆಯಿಂದ ಎಚ್ಚರಗೊಳುತ್ತಾರೆ. ಆಗ ಶರಣ ಕೇತಯ್ಯನವರು ಜಂಗಮಪ್ರೇಮಿ ಬಸವಣ್ಣನನ್ನು ಕೊಂಡಾಡುತ್ತಾರೆ-👇🏻
ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ, ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮತ್ರ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ. ಎಂದು ತನ್ನ ತನು ಮನ ಧನ ಪ್ರಾಣವೂ ಬಸವಣ್ಣನೇ ಆಗಿದ್ದಾನೆಂದು ತಿಳಿದು ಗುರುಲಿಂಗ (ಅರಿವು ಆಚಾರದಿಂದ) ತನ್ನ ಕಾಯವನ್ನೇ ಕೈಲಾಸವಾಗಿಸಿಕೊಂಡು, ಮನಸ್ಸಿನ ಸ್ಥಿರತೆಯಲ್ಲಿ ಏಕೋ ದೇವನ ನಿಷ್ಠರಾಗಿ ಲಿಂಗಾಚಾರ ಸಂಪನ್ನರಾಗಿ ಚೈತನ್ಯ ಭರಿತ ಜಂಗಮ ಲಿಂಗವಾದರು. ಇನ್ನು ಅಂತರಂಗ ಬಹಿರಂಗವನ್ನೂ ಮೀರಿ ಎಲ್ಲವೂ ರೋಮ ರೋಮವೆಲ್ಲವೂ ಬಸವಣ್ಣನೇ ಆಗಿ ಎನ್ನ ಪಾವನವ ಮಾಡಿದ ಎನ್ನುತ್ತಾ, ಶಿವನೇ ಮುನಿದು ನನ್ನ ಕೈಲಾಸಕ್ಕೆ ಒಯ್ದಡೆ ಶರಣನಿಗೆ ಅಲ್ಲಿ ಸುಖವಿಲ್ಲ ಕಾಯಕವೇ ಕೈಲಾಸವಾದ ಶರಣನಿಗೆ ಕಾಯಕದಿಂದಲೇ ಜೀವನ್ಮುಕ್ತಿ, ಜಂಗಮ (ಜಗತ್) ಸೇವೆಯಲ್ಲೇ ಜೀವನ್ಮುಕ್ತಿಯೆಂದು ತನ್ನ ಪ್ರಾಣಕ್ಕೆ ಪ್ರಾಣವನ್ನೇ ನೀಡಿ ಮರಳಿ ನನ್ನ ಮರ್ತ್ಯಕ್ಕೆ ತಂದು, ಕಾಯಕ ದಾಸೋಹ ಸಮಾನತೆಗಳಿಂದ ಈ ಇಡೀ ಮರ್ತ್ಯವನ್ನೇ ಕೈಲಾಸ ಮಾಡಿದನು ಬಸವಣ್ಣನು. ಇಂತೀ ಸಂಗನ ಬಸವಣ್ಣನೇ ಗುರುವಾಗಿ ಅನುಗ್ರಹಿಸಿದನಾಗಿ ನನಗೆ ದೇವರಿಗಿಂತ ಅಧಿಕವೂ ಬಸವಣ್ಣನೇ ಆಗಿರುವ. ಬಸವಣ್ಣನೇ ಘನಕ್ಕೆ ಘನಮಹಿಮ ಅಲ್ಲಮಪ್ರಭುದೇವರ ಅನುಪಮ ದಿವ್ಯ ಪಾದವನ್ನು ಕಂಡು ಪಾವನವಾದೆನೆಂದು ಹೇಳುತ್ತಾ ಕೈಲಾಸಕ್ಕಿಂತಲೂ ಕಾಯಕವೇ ಮೇಲೆಂದು, ಸಾರಿದವರು ಶರಣ ಮೇದಾರ ಕೇತಯ್ಯನವರು, ಕೈಲಾಸದಲ್ಲಿ ಶಿವನಿದ್ದಾನೆಂಬುದನ್ನು ವಿರೋಧಿಸಿ, ಮರ್ತ್ಯಲೋಕದ ಪ್ರತಿ ಜೀವಿಗಳಲ್ಲೂ ಶಿವನನ್ನೇ ಕಂಡು ಆ ಜೀವ ಚೈತನ್ಯವೆಂಬ ಜಂಗಮ ಲಿಂಗಕ್ಕೆ ದಾಸೋಹವ ಮಾಡಿ ಈ ಭೂಲೋಕವನ್ನೇ ಕಲ್ಯಾಣ ಕೈಲಾಸವಾಗಿಸಿದವರು ‘ಕಾಯಕ ನಿಷ್ಠ ಬಸವಾದಿ ಶರಣ ಮೇದಾರ ಕೇತಯ್ಯನವರು.’👏🏻👏🏻👏🏻
✍🏾ವಿಶೇಷ ಲೇಖನ-; - ಲೋಕೇಶ್_ಎನ್_ಮಾನ್ವಿ.
-/9972536176
Comments
Post a Comment