ಕೋಳಿಗೆ ವೇಳೆಯ ಅರಿವಿದೆ, ಕತ್ತೆಗೆ ಹಸಿವಿನ ಅರಿವಿದೆ, ಮನುಷ್ಯನಿಗೆ ಕನಿಷ್ಠ ತನ್ನ ಅರಿವಾದರೂ ಇರಬೇಕಲ್ಲವೇ. ಷನ್ಮುಖ ಶಿವಯೋಗಿಗಳ ವಚನದ ವಿಶ್ಲೇಷಣೆ.
ಓಂ ಶ್ರೀಗುರುಬಸವಲಿಂಗಾಯ ನಮಃ
ಕೋಳಿ ಕೂಗುವುದು ಬೆಳಗಿನ ವೇಳೆಯನರಿದು.
ಕತ್ತೆ ಕೂಗುವುದು ತನ್ನ ಹೊತ್ತಿನ ಗೊತ್ತನರಿದು.
ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ #ಅಖಂಡೇಶ್ವರಾ.
-;ಷನ್ಮುಖ ಶಿವಯೋಗಿಗಳು.
ಭಾವಾರ್ಥ-:
‘ಕೋಳಿ ಕೂಗುವುದು ಬೆಳಗಿನ ವೇಳೆಯನರಿದು’
ಗಡಿಯಾರಗಳಿಲ್ಲದ ಅಂದಿನ ಕಾಲಮಾನದಲ್ಲಿ, ಕೋಳಿಯ ಕೂಗು (Alarm) ಅಲಾರಾಮಿನಂತಿತ್ತು.
ಸೂರ್ಯನುದಯಕ್ಕೆ ನಾಚಿ ಭಾನು ಕೆಂಪಾದಾಗ ಕೋಳಿ ಕೂಗುತಿತ್ತು.
ಆಗ ಬೆಳಗಾಯಿತೆಂದು ಅರಿತು ಜನರು ಎದ್ದೇಳುತಿದ್ದರು.
‘ಕತ್ತೆ ಕೂಗುವುದು ತನ್ನ ಹೊತ್ತಿನ ಗೊತ್ತನರಿದು’
ಕತ್ತೆಯು ತನ್ನ ನಿತ್ಯದ ಕೆಲಸದಲ್ಲಿ, ಸತ್ತಂತೆ ಮೈಮರೆತು ದುಡಿಯುತಿದ್ದರೂ ಹಸಿವಾಗುವ ಹೊತ್ತನರಿತು ಕೂಗುತ್ತದೆ.
‘ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ #ಅಖಂಡೇಶ್ವರಾ’
ಆದರೆ ಶಿವಭಕ್ತನಾದ ಬಳಿಕ ತನ್ನ ತಾನರಿತು, ತನ್ನಾತ್ಮದ ಕುರುಹನ್ನು ತಿಳಿದು, ಪ್ರಾಪಂಚಿಕ ವಿಷಯವನ್ನು ಅಳಿದು, ಲೋಕಾಡಂಬರವನ್ನು ಬಿಟ್ಟು, ಮೌಢ್ಯಾಚರಣೆಯನ್ನು ತ್ಯಜಿಸಿ ಮುಕ್ತನಾಗಿ, ನಿತ್ಯ ನಿರ್ಮಲವಾಗಿ ನಿಷ್ಕಲ್ಮಶ ಮನಸ್ಸಿನಿಂದ ಭಕ್ತನಾಗಬೇಕು, ತನ್ನ ಅರುಹಿನ ಕುರುಹನ್ನು ಅರಿಯಬೇಕು, ಅಂತಲ್ಲದಿದ್ದರೆ ಅದು ವ್ಯರ್ಥ ಜೀವನವಾಗುತ್ತದೆ.
ತಿಪ್ಪೆಯನ್ನು ಕೆದರುವ ಒಂದು ಕೋಳಿಯು ಸಹ ಸೂರ್ಯೋದಯದ ಚೆಲುವ ಕಂಡು ಬೆಳಗಾಯಿತೆಂದು ಅರಿತು ಕೂಗುತ್ತದೆ, ಸದಾ ಮತ್ತೊಬ್ಬರ ಭಾರವನ್ನೇ ಹೊರುವ ಕತ್ತೆಯು ಕೂಡ ತನಗೆ ಹಸಿವಾಗುವ ಹೊತ್ತನ್ನು ಅರಿತು ಕೂಗುತ್ತದೆ, ಇನ್ನಿವೆರಡು ಪ್ರಾಣಿಗಳಲ್ಲಿರುವ ಸಾಮಾನ್ಯ ಜ್ಞಾನದ ಅರಿವು, ಮಾನವರಾದ ನಮ್ಮಲಿಲ್ಲದಿದ್ದರೆ ಹೇಗೆ,?
ಆ ಕೋಳಿ ಕತ್ತೆಗಳಿಗಿಂತ ಕಡು ಕಷ್ಟಕರವಾದ ಬದುಕನ್ನೇ ಎದುರಿಸಬೇಕಾಗುತ್ತದೆ, ಎಂದು ಎಚ್ಚರಿಸುತ್ತಾರೆ, ಷನ್ಮುಖ ಶಿವಯೋಗಿಗಳು.👏🏻👏🏻
Facebook-https://www.facebook.com/lokesh.nlokesh.7
Comments
Post a Comment